Select Your Language

Notifications

webdunia
webdunia
webdunia
webdunia

ದಾವೂದ್‌ನನ್ನು ನಮಗೊಪ್ಪಿಸಿ: ಪಾಕ್‌ಗೆ ಖಡಕ್ ಸೂಚನೆ ನೀಡಿದ ಭಾರತ

ದಾವೂದ್‌ನನ್ನು ನಮಗೊಪ್ಪಿಸಿ: ಪಾಕ್‌ಗೆ ಖಡಕ್ ಸೂಚನೆ ನೀಡಿದ ಭಾರತ
ನವದೆಹಲಿ , ಭಾನುವಾರ, 28 ಡಿಸೆಂಬರ್ 2014 (11:29 IST)
ಮೋಸ್ಟ್ ವಾಟೆಂಡ್  ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇರುವ ಕುರಿತು ಬಲವಾದ ಸಾಕ್ಷ್ಯಾಧಾರ ದೊರೆತಿರುವ ಹಿನ್ನೆಲೆಯಲ್ಲಿ, ಆತನನ್ನು ನಮಗೊಪ್ಪಿಸಿ ಎಂದು ಭಾರತ ಸರ್ಕಾರ ಪಾಕಿಸ್ತಾನಕ್ಕೆ ಖಡಕ್ ಸೂಚನೆ ನೀಡಿದೆ. 
"ಪೇಶಾವರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನ ತಾನು ಉಗ್ರರ ವಿರುದ್ಧ ಕಠಿಣ ನಿಲುವು ತಾಳಿದೆ ಎಂದು ಸಾರಿ ಹೇಳಿತ್ತು. ಆದ್ರೆ ಪಾಕ್​ ನಿಜಕ್ಕೂ ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಒಪ್ಪಿಸಲಿ.  ಭಯೋತ್ಪಾದನೆ ವಿರುದ್ಧ ಭಾರತ ನಡೆಸುತ್ತಿರುವ ಹೋರಾಟದಲ್ಲಿ ಕೈ ಜೋಡಿಸಲಿ" ಎಂದು ಗೃಹ ಇಲಾಖೆ ರಾಜ್ಯ ಸಚಿವ ಕಿರಣ್​ ರಿಜಿಜು ಹೇಳಿದ್ದಾರೆ.
 
 1993 ಮುಂಬೈ ಸರಣಿ ಸ್ಫೋಟ ರೂವಾರಿಯಾದ ದಾವೂದ್  ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವುದಾಗಿ ಭಾರತ ಹೇಳುತ್ತಲೆ ಬಂದಿದೆ. ಪಾಕ್ ರಹಸ್ಯವಾಗಿ ಆತನಿಗೆ ನೆಲೆ ನೀಡಿದೆ ಎಂಬ ಶಂಕೆ ಈಗ ಸತ್ಯವೆನಿಸಿಕೊಂಡಿದೆ. ಈಗ ದಾವೂದ್ ಕರಾಚಿಯಲ್ಲೇ ಇರುವ ಕುರಿತು ಗುಪ್ತಚರ ಸಂಸ್ಥೆಗಳಿಗೆ ಬಲವಾದ ಸಾಕ್ಷ್ಯಾಧಾರ ದೊರೆತಿದೆ. ಪಾಕಿಸ್ತಾನದ ಖ್ಯಾತ ಉದ್ಯಮಿಯ ಪುತ್ರನೊಂದಿಗೆ ದಾವೂದ್ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ ದಾಖಲೆ ಗುಪ್ತಚರ ಸಂಸ್ಥೆಗಳಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಕೂಡಲೇ ಭಾರತಕ್ಕೆ ಹಸ್ತಾಂತರಿಸಿ ಎಂದು ಪಾಕಿಸ್ತಾನಕ್ಕೆ ಗೃಹ ಇಲಾಖೆ ತಾಕೀತು ಮಾಡಿದೆ.
 
ಪಾಕಿಸ್ತಾನದ ಖ್ಯಾತ ಉದ್ಯಮಿಯೊಬ್ಬರ ಪುತ್ರ ಮತ್ತು ದುಬೈನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿರುವ  ಯಾಸೀರ್ ಎಂಬ ವ್ಯಕ್ತಿಯೊಂದಿಗೆ ದಾವೂದ್ 'ಕ್ಲಿಫ್ಟನ್' ಪ್ರದೇಶದಿಂದ ಸಂಭಾಷಣೆ ನಡೆಸಿದ್ದಾನೆ. 'ದುಬೈನಲ್ಲಿ ತಾನು 1,100 ಕೋಟಿ ರೂಪಾಯಿ ಬೆಲೆಬಾಳುವ ಆಸ್ತಿ ಹೊಂದಿದ್ದೇನೆ. ಕರಾಚಿ ಸೇರಿ ವಿವಿದೆಡೆ  ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ತನಗೆ ತಡೆ ಒಡ್ಡುವವರು ಯಾರೂ ಇಲ್ಲ. ತಾನು ಪ್ರಧಾನಿ, ಕೋರ್ಟ್ ಹಾಗೂ ನ್ಯಾಯಾಧೀಶನಿದ್ದಂತೆ' ಎಂದು ಉಗ್ರ ಮಾತುಕತೆ ವೇಳೆ ಹೇಳಿಕೊಂಡಿದ್ದಾನೆ. 
 
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ಆಗಿದ್ದ ದಾವೂದ್ ಇಬ್ರಾಹಿಂ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರಲ್ಲೊಬ್ಬ. 1993ರಲ್ಲಿ ಭಾರತದಿಂದ ಪರಾರಿಯಾಗಿರುವ ಈತನನ್ನು ಪಾಕ್ ರಕ್ಷಣೆ ಕೊಟ್ಟು ಪೋಷಿಸುತ್ತಿದೆ.
 
ಡಿ ಕಂಪನಿ ಮೂಲಕ ಭಾರತ ಸೇರಿ ಅನೇಕ ದೇಶಗಳಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ದಾವೂದ್ ಬಂಧನಕ್ಕೆ ಭಾರತ ಅಮೇರಿಕ ಜಂಟಿ ಕಾರ್ಯತಂತ್ರ ರೂಪಿಸಿವೆ.
 
ಕಳೆದ ವರ್ಷ  ಭಾರತೀಯ ಕಮಾಂಡೋಗಳ ತಂಡವೊಂದು ದಾವೂದ್ ಬೇಟೆಗೆ ಸರ್ವ ತಯಾರಿ ನಡೆಸಿತ್ತು. ದಾವೂದ್ ಪ್ರತಿ ನಿತ್ಯ ಓಡಾಡುವ ದಾರಿಯಲ್ಲಿ ಕಾದು ಕೊಂಡಿದ್ದ ಕಮಾಂಡೋಗಳು ಇನ್ನೇನು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎನ್ನುವ ಹವಣಿಕೆಯಲ್ಲಿದ್ದಾಗ ಅಜ್ಞಾತ ಫೋನ್ ಕರೆಯೊಂದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು.

Share this Story:

Follow Webdunia kannada