Select Your Language

Notifications

webdunia
webdunia
webdunia
webdunia

ರಾಜ್ಯದ 6 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ

ರಾಜ್ಯದ 6 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ
ನವದೆಹಲಿ , ಗುರುವಾರ, 27 ಆಗಸ್ಟ್ 2015 (13:45 IST)
ಪ್ರಧಾನಿ ಮೋದಿಯವರ ಮಹಾತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಗೆ ಕರ್ನಾಟಕದ 6 ನಗರಗಳು ಆಯ್ಕೆಯಾಗಿವೆ. ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ವೆಂಕಯ್ಯ ನಾಯ್ಡು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ 98 ನಗರಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ 24 ರಾಜ್ಯ ರಾಜಧಾನಿಗಳ ಹೆಸರುಗಳು ಸಹ ಇವೆ.
ಸ್ಮಾರ್ಟ್ ಸಿಟಿ ಹೊಂದಲಿರುವ ವೈಶಿಷ್ಟ್ಯಗಳನ್ನು ಸಹ ಸರ್ಕಾರ ಬಿಡುಗಡೆ ಮಾಡಿದೆ. 
 
ಮಂಗಳೂರು, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಮತ್ತು ತುಮಕೂರು ನಗರಗಳನ್ನು ರಾಜ್ಯ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಶಿಫಾರಸು ಮಾಡಿತ್ತು. ಈ ಶಿಫಾರಸ್ಸನ್ನು ಮಾನ್ಯ ಮಾಡಿರುವ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಗೆ ಈ ನಗರಗಳ ಹೆಸರನ್ನು ಸೇರ್ಪಡೆ ಮಾಡಿದೆ. ಈ ನಗರಗಳ ಜನಸಂಖ್ಯೆ ಆಧರಿಸಿ ಅವುಗಳನ್ನು ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿದೆ. 
 
ದೇಶದ ವಿಶಾಲ ರಾಜ್ಯ ಎಂದು ಕರೆಸಿಕೊಳ್ಳುವ ಉತ್ತರ ಪ್ರದೇಶ ಮತ್ತು ನಮ್ಮ ನೆರೆ ರಾಜ್ಯ ತಮಿಳುನಾಡು ಯೋಜನೆಯಲ್ಲಿ ಹೆಚ್ಚಿನ ಪಾಲನ್ನು ಪಡೆದುಕೊಂಡಿವೆ.
 
ಉತ್ತರ ಪ್ರದೇಶದ 13 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದರೆ, ತಮಿಳುನಾಡಿನಿಂದ 12 ನಗರಗಳು ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.
 
ಇನ್ನುಳಿದಂತೆ ಮಹಾರಾಷ್ಟ್ರ 10, ಮಧ್ಯಪ್ರದೇಶ 7, ಗುಜರಾತ್ 6, ಪಂಜಾಬ್, ಆಂಧ್ರಪ್ರದೇಶ್, ಬಿಹಾರ್ ರಾಜ್ಯಗಳಲ್ಲಿ ತಲಾ 3, ತೆಲಂಗಾಣದ 2 ನಗರಗಳು ಯೋಜನೆಗೆ ಆಯ್ಕೆಯಾಗಿವೆ.
 
ಯೋಜನೆಗೆ ಎನ್‌ಡಿಎ ಸರ್ಕಾರ 48 ಸಾವಿರ ಕೋಟಿ ರೂಪಾಯಿಯನ್ನು ಘೋಷಿಸಿದೆ. ನಗರಗಳ ನೀಲ ನಕ್ಷೆ ಸಿದ್ಧ ಪಡಿಸಲು ಸದ್ಯದಲ್ಲೇ 2 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
 
ನಗರ ಜೀವನದ ಗುಣಮಟ್ಟವನ್ನು ವರ್ಧಿಸುವುದು ಸ್ಮಾರ್ಟ್ ಸಿಟಿ ಯೋಜನೆಯ ಉದ್ದೇಶ. ಇದು ಅತ್ಯಂತ ಪ್ರಾಯೋಗಿಕ ಮತ್ತು ನೈಜವಾಗಿದೆ. ಯೋಜನೆಯ ಯಶಸ್ಸಿಗೆ ಸಾರ್ವಜನಿಕರ ಭಾಗವಹಿಸುವಿಕೆಯ ಅಗತ್ಯವಿದೆ," ಎಂದು ನಾಯ್ಡು ಹೇಳಿದ್ದಾರೆ.

Share this Story:

Follow Webdunia kannada