ನವದೆಹಲಿ : ದೇಶದ ಹಲವೆಡೆ ಇಂದಿನಿಂದಲೇ ಜಾರಿಗೆ ಬರುವಂತೆ ಕೆಜಿಗೆ ಟೊಮೆಟೋ ದರವನ್ನು 80 ರೂ.ಗೆ ಇಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ದೇಶವ್ಯಾಪಿ 500 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಟೊಮೆಟೋ ಬೆಲೆ ಏರಿಕೆಯ ಪರಿಸ್ಥಿತಿ ಮರು ಮೌಲ್ಯಮಾಪನದ ನಂತರ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಕೆಜಿ ಟೊಮೆಟೋವನ್ನು 80 ರೂ.ಗೆ ಮಾರಾಟ ಮಾಡಲು ನಿರ್ಧರಿಸಿದೆ.
NAFED ಮತ್ತು NCCF ಮೂಲಕ ನೊಯ್ಡಾ, ಲಕ್ನೋ, ಕಾನ್ಪುರ್, ವಾರಣಾಸಿ, ಪಾಟ್ನಾ, ಮುಜಾಫರ್ಪುರ, ಅರ್ರಾ ಸೇರಿ ಅನೇಕ ಸ್ಥಳಗಳಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳನ್ನು ಅವಲಂಬಿಸಿ ಟೊಮೆಟೋ ಮಾರಾಟಕ್ಕೆ ಕ್ರಮಕೈಗೊಂಡಿದೆ. ನಾಳೆಯಿಂದ ಹೆಚ್ಚಿನ ನಗರಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ಪ್ರಕಟಣೆ ಮೂಲಕ ತಿಳಿಸಿದೆ.
ಮಾನ್ಸೂನ್ ಮಳೆ ಕಾರಣ ಚಿಲ್ಲರೆ ಮಾರುಕಟ್ಟೆಗಳಲ್ಲಿ ಶನಿವಾರದಂದು ಟೊಮೆಟೋ ಬೆಲೆ ಪ್ರಮುಖ ನಗರಗಳಲ್ಲಿ ಪ್ರತಿ ಕೆಜಿಗೆ 250 ರೂ. ಮಾರಾಟವಾಗುತ್ತಿತ್ತು. ಸರ್ಕಾರದ ಅಂಕಿಅಂಶಗಳ ಪ್ರಕಾರ, ಅಖಿಲ ಭಾರತ ಸರಾಸರಿ ಬೆಲೆ ಪ್ರತಿ ಕೆಜಿಗೆ 117 ರೂ. ಚಿಲ್ಲರೆ ಗ್ರಾಹಕರಿಗೆ ಪರಿಹಾರ ನೀಡಲು, ದೆಹಲಿ-ಎನ್ಸಿಆರ್, ಪಾಟ್ನಾ ಮತ್ತು ಲಕ್ನೋದಂತಹ ಆಯ್ದ ನಗರಗಳಲ್ಲಿ ಕೇಂದ್ರವು ಪ್ರತಿ ಕೆಜಿಗೆ 90 ರೂ.ಗೆ ರಿಯಾಯಿತಿ ದರದಲ್ಲಿ ಟೊಮೆಟೋವನ್ನು ಮಾರಾಟ ಮಾಡುತ್ತಿದೆ. ಮೊಬೈಲ್ ವ್ಯಾನ್ಗಳ ಮೂಲಕ ಶನಿವಾರ ದೆಹಲಿ-ಎನ್ಸಿಆರ್ನಲ್ಲಿ ಸುಮಾರು 18,000 ಕೆಜಿ ಮಾರಾಟವಾಗಿದೆ.