Select Your Language

Notifications

webdunia
webdunia
webdunia
webdunia

ಬಿಸಿಲಲ್ಲಿ ಧರಣಿ ನಡೆಸಬೇಡಿ, ಕಪ್ಪಾಗುತ್ತೀರಾ; ನರ್ಸ್‌ಗಳಿಗೆ ಗೋವಾ ಮುಖ್ಯಮಂತ್ರಿ

ಬಿಸಿಲಲ್ಲಿ ಧರಣಿ ನಡೆಸಬೇಡಿ, ಕಪ್ಪಾಗುತ್ತೀರಾ; ನರ್ಸ್‌ಗಳಿಗೆ ಗೋವಾ ಮುಖ್ಯಮಂತ್ರಿ
ಪಣಜಿ , ಬುಧವಾರ, 1 ಏಪ್ರಿಲ್ 2015 (15:42 IST)
ಕಡು ಬಿಸಿಲಲ್ಲಿ ಕುಳಿತು ಉಪವಾಸ ಧರಣಿ ನಡೆಸಬೇಡಿ.  ಇದರಿಂದ ನಿಮ್ಮ ಮೈ ಬಣ್ಣ ಕಪ್ಪಾಗುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನಕ್ಕೆ ಸಮಸ್ಯೆಯುಂಟಾಗುತ್ತದೆ ಎಂದು ಪ್ರತಿಭಟನಾ ನಿರತ ದಾದಿಗಳಿಗೆ ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಸಲಹೆ ನೀಡಿದ್ದಾರೆ. ಈ ಮೂಲಕ ಹೊಸ ವಿವಾದವನ್ನು ತಲೆ ಮೇಲೆ ಎಳೆದುಕೊಂಡಿದ್ದಾರೆ. 

ನಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ಇಂದು ನಾವು ಪೋಂಡಾದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾದೆವು. ಆಗ ಅವರು ಹುಡುಗಿಯರು ಬಿಸಿಲಲ್ಲಿ ಧರಣಿ ನಡೆಸಬಾರದು. ಬಿಸಿ ತಾಪಕ್ಕೆ ನಿಮ್ಮ ಮೈ ಬಣ್ಣ ಕಪ್ಪಾಗುತ್ತದೆ ಮತ್ತು ನಿಮಗೆ ಉತ್ತಮ ವರ ಸಿಗಲಾರ ಎಂದು ಹೇಳಿದರು ಎಂದು ಪ್ರತಿಭಟನಾ ನಿರತರಲ್ಲಿ ಒಬ್ಬಳಾದ ಅನುಷಾ ಸಾವಂತ್ ಹೇಳಿದ್ದಾರೆ. 
 
ಈ ಕಾಮೆಂಟ್  ಅನುಚಿತವಾದದ್ದು. ಅವರು ನಮ್ಮ ಬಗ್ಗೆ ಕಾಳಜಿ ಹೊಂದಿದ್ದರೆ ನಮ್ಮ ಬೇಡಿಕೆಗಳನ್ನು ಪೂರೈಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ," ಎಂದು ಅವರು ಹೇಳಿದ್ದಾರೆ. ಆದರೆ ತಮ್ಮ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಪರ್ಸೇಕರ್ ಲಭ್ಯರಾಗಿಲ್ಲ.
 
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಕಚೇರಿ ಅಧಿಕಾರಿಗಳೊಬ್ಬರು ಮುಖ್ಯಮಂತ್ರಿ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದು ನಮಗೆ ಖಚಿತವಾಗಿ ತಿಳಿದಿಲ್ಲ. ಆದರೆ ಅವರು ಈ ರೀತಿಯಾಗಿ ಮಾತನಾಡಿದ್ದಾರೆ ಎಂದು ನಮಗೆ ಅನಿಸುವುದಿಲ್ಲ ಎಂದು  ಹೇಳಿದ್ದಾರೆ. 
 
ಗೋವಾದಲ್ಲಿ ಸರಕಾರದಿಂದ ಅನುಮೋದನೆ ಪಡೆದು ಖಾಸಗಿ ಸಂಸ್ಥೆ ನಡೆಸುತ್ತಿರುವ 108 ಅಂಬುಲೆನ್ಸ್ ಸೇವೆಗೆ ಸಂಬಂಧಿಸಿರುವ ದಾದಿಯರು ಮತ್ತು ಇತರ ಕೆಲಸಗಾರರು ಕೆಲ ದಿನಗಳಿಂದ ಧರಣಿ ನಿರತರಾಗಿದ್ದಾರೆ. ಸರಕಾರ 33 ಅಂಬುಲೆನ್ಸ್‌ಗಳಿಗೆ ಹಣ ಸಂದಾಯ ಮಾಡಿದ್ದರೂ ಕೇವಲ 13 ಅಂಬುಲೆನ್ಸ್ ವಾಹನಗಳು ಮಾತ್ರ ಲಭ್ಯವಿವೆ. ಆದ್ದರಿಂದ ಉದ್ಯೋಗಿಗಳ ಪ್ರತಿನಿಧಿಗಳು ಎರಡು ಬಾರಿ ಪರ್ಸೇಕರ್ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಯನ್ನು ಅವರ ಮುಂದಿಟ್ಟಿದ್ದರು. ಆದರೆ ಫಲವಿಲ್ಲದಾದಾಗ ಧರಣಿಗೆ ಕುಳಿತಿದ್ದಾರೆ. 
 
ನಾವು ಸರ್ಕಾರದ ಅಧಿಕಾರಿಗಳ ಸಹಕಾರದೊಂದಿಗೆ ಕಂಪನಿ ಎಸಗುತ್ತಿರುವ ವಂಚನೆ ಕುರಿತು ಜಾಗೃತಿ ಮೂಡಿಸಲು ಸಹ ಬಯಸುತ್ತೇವೆ," ಎಂದು ಭಾರತೀಯ ಮಜ್ದೂರ್ ಸಂಘದ ಗೋವಾ ಘಟಕದ ಅಧ್ಯಕ್ಷ ಹೃದಯನಾಥ್ ಶಿರೋಡ್ಕರ್ ತಿಳಿಸಿದ್ದಾರೆ. 

Share this Story:

Follow Webdunia kannada