ಮುಂಬೈ : ತೀವ್ರ ಹಣಕಾಸಿನ ಕೊರತೆಯಿಂದಾಗಿ ಗೋ ಫಸ್ಟ್ ಏರ್ಲೈನ್ಸ್ ತನ್ನ ಹಾರಾಟವನ್ನು ನಿಲ್ಲಿಸಿದೆ.
ಆರ್ಥಿಕ ಸಮಸ್ಯೆಯಿಂದಾಗಿ ಅಮೆರಿಕ ಮೂಲದ ಕಂಪನಿಯಿಂದ ಎಂಜಿನ್ಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಸಂಸ್ಥೆಯ 50% ನಷ್ಟು ವಿಮಾನಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿತ್ತು. ಇದೀಗ ಸಂಪೂರ್ಣ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುವುದಾಗಿ ಸಂಸ್ಥೆ ಘೋಷಿಸಿಕೊಂಡಿದೆ.
ಈ ಬಗ್ಗೆ 24 ಗಂಟೆಗಳ ಒಳಗಾಗಿ ಉತ್ತರವನ್ನು ನೀಡುವಂತೆ ವಿಮಾನಯಾನ ನಿಯಂತ್ರಣ ಸಂಸ್ಥೆ ಕೇಳಿದೆ. ವಿಮಾನ ಹಾರಾಟ ಸ್ಥಗಿತಕ್ಕೂ ಮುನ್ನ ನಿಯಂತ್ರಣ ಸಂಸ್ಥೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಮಾಹಿತಿ ನೀಡದಿದ್ದಲ್ಲಿ ನಿಯಮದ ಉಲ್ಲಂಘನೆಯಾಗಲಿದೆ.
ವಾಡಿಯಾ ಗ್ರೂಪ್ ಒಡೆತನದ ರಾಷ್ಟ್ರೀಯ ಕಂಪನಿಯು ಕಾನೂನು ನ್ಯಾಯಮಂಡಳಿಯ ಮುಂದೆ ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸಿದೆ. ಇದು ದುರದೃಷ್ಟಕರ ನಿರ್ಧಾರ, ಆದರೆ ಕಂಪನಿಯ ಹಿತಾಸಕ್ತಿಗಳನ್ನು ರಕ್ಷಿಸಲು ಇದನ್ನು ಮಾಡಬೇಕಾಗಿದೆ ಎಂದು ಗೋ ಫಸ್ಟ್ ಮುಖ್ಯ ಕಾರ್ಯನಿರ್ವಾಹಕ ಕೌಶಿಕ್ ಖೋನಾ ತಿಳಿಸಿದ್ದಾರೆ.