Select Your Language

Notifications

webdunia
webdunia
webdunia
webdunia

ಕನ್ಹಯ್ಯಾಗೆ ಸವಾಲೆಸೆದ ಬಾಲಕಿಗೆ ಜೀವ ಬೆದರಿಕೆ

ಕನ್ಹಯ್ಯಾಗೆ ಸವಾಲೆಸೆದ ಬಾಲಕಿಗೆ ಜೀವ ಬೆದರಿಕೆ
ಲೂಧಿಯಾನ , ಶುಕ್ರವಾರ, 11 ಮಾರ್ಚ್ 2016 (15:37 IST)
ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ದೇಶದ್ರೋಹದ ಆರೋಪವನ್ನೆದುರಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರಿಗೆ ಸವಾಲೆಸೆದಿರುವ 15ವರ್ಷದ  ಬಾಲಕಿ ಜಾಹ್ನವಿ ಬೆಹ್ಲ್‌‌ಗೆ  ಸಾಮಾಜಿಕ ಜಾಲ ತಾಣಗಳಲ್ಲಿ ಬೆದರಿಕೆ ಬರತೊಡಗಿದೆ.
 
ತನಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಲಾಗುತ್ತಿದೆ. ಅದರಲ್ಲಿ ಹೆಚ್ಚಿನವರು ಕನ್ನಯ್ಯಾ ಬೆಂಬಲಿಗರು ಮತ್ತು ಜೆಎನ್‌ಯು ವಿದ್ಯಾರ್ಥಿಗಳು ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. 
 
ನನ್ನ ಮಗಳು ಕನ್ಹಯ್ಯ ಕುಮಾರ್‌ಗೆ ಸವಾಲು ಹಾಕಿದಾಗಿನಿಂದ ಆಕೆಯ ಸಾಮಾಜಿಕ ಜಾಲತಾಣದ ಖಾತೆಗಳಿಗೆ ಪ್ರವಾಹೋಪಾದಿಯಲ್ಲಿ ಬೆದರಿಕೆಗಳು ಬರುತ್ತಿವೆ. ಕೆಲ ವ್ಯಕ್ತಿಗಳು ಬಾಲಕಿ ವಿರುದ್ಧ ಅಶ್ಲೀಲ ಭಾಷೆ ಬಳಸಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಜಾಹ್ನವಿ ತಂದೆ ಅಶ್ವಿನ್ ಬೆಹ್ಲ್ ತಿಳಿಸಿದ್ದಾರೆ.
 
ಕನ್ಹಯ್ಯಾ ಹಾಗೂ ಆತನ ಬೆಂಬಲಿಗರು ಸೋಲುವ ಭಯದಲ್ಲಿ ಚರ್ಚೆಯಿಂದ ತಪ್ಪಿಸಿಕೊಳ್ಳಲು ಈ ರೀತಿಯಾಗಿ ಮಾಡುತ್ತಿದ್ದಾರೆ.  ಕನ್ಹಯ್ಯಾ ಸೈನಿಕರ ವಿರುದ್ಧ ಹೇಳಿಕೆ ನೀಡಿದ್ದಾನೆ. ಅದು ಖಂಡನೀಯ, ರಾಜಕೀಯ ಲಾಭಕ್ಕೋಸ್ಕರ ಯಾವುದೇ ಆಧಾರವಿಲ್ಲದೆ ಕನ್ಹಯ್ಯ ಆರೋಪಗಳನ್ನು ಮಾಡುತ್ತಿದ್ದಾನೆ. ನಮಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ಸೈನಿಕರ ತ್ಯಾಗವನ್ನುನಾವು ಮರೆಯಬಾರದು ಎಂದು  ಹೇಳಿದ್ದಾಳೆ.
 
ಆಕೆಗೆ ರಕ್ಷಣೆ ಕೊಡುವಂತೆ ರಕ್ಷಾ ಜ್ಯೋತಿ ಸ್ವಯಂ ಸೇವಾ ಸಂಸ್ಥೆ ಪಂಜಾಬ್ ಡಿಜಿಪಿಗೆ ಪತ್ರ ಬರೆದಿದೆ. 
 
ರಕ್ಷಾ ಜ್ಯೋತಿ ಸ್ವಯಂ ಸೇವಾ ಸಂಸ್ಥೆ ಕಾರ್ಯಕರ್ತೆಯಾಗಿರುವ ಬಾಲಕಿ ಪಂಜಾಬ್‌ನ ಲುಧಿಯಾನಾ ಜಿಲ್ಲೆಯ ಭಾಯ್ ರಣಧೀರ್ ಸಿಂಗ್ ನಗರದ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿದ್ದಾಳೆ. ಇತ್ತೀಚೆಗೆ ದೆಹಲಿಯ ವಿವಿಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಕನ್ಹಯ್ಯ ಕುಮಾರ್‌ಗೆ ಮುಕ್ತ ಚರ್ಚೆಗೆ ಆಹ್ವಾನಿಸಿದ್ದ ಬಾಲಕಿ ದೇಶ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಿ ಎಂದು ಕಳೆದ ವಾರ ಹೇಳಿದ್ದಳು.
 
ನಮ್ಮ ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ. ಅದರರ್ಥ ನಾವು ನಮ್ಮ ಮಾತಿನ ಎಲ್ಲೆ ಮೀರಬೇಕೆಂದಲ್ಲ. ಕನ್ಹಯ್ಯ ಮತ್ತು ಉಳಿದವರು ಮೂಲಭೂತ ಹಕ್ಕನ್ನು ರಾಜಕೀಯ ಲಾಭಕ್ಕೊಸ್ಕರ ಬಳಸಿಕೊಳ್ಳುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಜೆಎನ್‌ಯುನಲ್ಲಿ ನಡೆದಿದ್ದನ್ನು ಯಾವ ಭಾರತೀಯನಿಂದಲೂ ಸಹಿಸಲು ಸಾಧ್ಯವಿಲ್ಲ. ಗಡಿಯಲ್ಲಿ ಪಾಕ್ ಪ್ರಚೋದಿತ ಉಗ್ರರ ವಿರುದ್ದ ನಮ್ಮ ಸೈನಿಕರು ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಿದ್ದರೆ, ಇಲ್ಲಿ ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆಯನ್ನು ಕೂಗುತ್ತಿದ್ದಾರೆ", ಎಂದು ಜಾನ್ವಿ ಗುಡುಗಿದ್ದಳು.
 
"ಪ್ರಧಾನಿ ಮೋದಿ ಅವರನ್ನು ನಿಂದಿಸುವುದು ತಪ್ಪು. ಅವರು ದೇಶದ ಜನರಿಂದ ಚುನಾಯಿತರಾದ ಪ್ರತಿನಿಧಿ. ಮನೆಯಲ್ಲಿ ಕುಳಿತು ಮಾತನಾಡುವುದು ಸುಲಭ. ಆದರೆ ಪ್ರಧಾನಿ ಮೋದಿಯವರ ಹಾಗೇ ಕೆಲಸ ಮಾಡುವುದು ಸುಲಭದ ಮಾತಲ್ಲ", ಎಂದು ಬಾಲಕಿ ಆಕ್ರೋಶ ವ್ಯಕ್ತ ಪಡಿಸಿದ್ದಳು.
 
2010 ರಿಂದ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿರುವ ಜಾನ್ವಿ, ಸ್ವಚ್ಛ ಭಾರತ ಅಭಿಯಾನ, ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಜನಜಾಗೃತಿ ಅಭಿಯಾನಗಳಲ್ಲಿ ಸಕ್ರಿಯಳಾಗಿದ್ದಾಳೆ.  
 
ಜಾನ್ವಿ ಪ್ರಧಾನಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಸ್ಪಚ್ಛ ಭಾರತ ಅಭಿಯಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿತಳಾಗಿದ್ದಳು.  

Share this Story:

Follow Webdunia kannada