Select Your Language

Notifications

webdunia
webdunia
webdunia
webdunia

ಸಂಸದರ ಅಮಾನತು: ಗಾಂಧಿ ಪ್ರತಿಮೆಯ ಮುಂದೆ ಕಾಂಗ್ರೆಸ್ ಧರಣಿ

ಸಂಸದರ ಅಮಾನತು: ಗಾಂಧಿ ಪ್ರತಿಮೆಯ ಮುಂದೆ ಕಾಂಗ್ರೆಸ್ ಧರಣಿ
ನವದೆಹಲಿ , ಮಂಗಳವಾರ, 4 ಆಗಸ್ಟ್ 2015 (11:35 IST)
ಸ್ಪೀಕರ್ ಸುಮಿತ್ರಾ ಮಹಾಜನ್ ಕಾಂಗ್ರೆಸ್‌ನ 25 ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಂಸತ್ ಭವನದ ಮುಂದಿರುವ ಗಾಂಧಿ ಪ್ರತಿಮೆಯ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ

ಕೈಗೆ ಕಪ್ಪುಪಟ್ಟಿ ಧರಿಸಿ ಕಾಂಗ್ರೆಸ್ ಸಂಸದರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. 
 
ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಗುಲಾಂ ನಬಿ ಆಜಾದ್, ಎ.ಕೆ. ಆಂಟನಿ, ಲೋಕಸಭೆ ಮತ್ತು ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. 
 
'ಸಂಸತ್ತನ್ನು ಸಮರ್ಪಕವಾಗಿ ನಿರ್ವಹಿಸುವುದು ಸರಕಾರದ ಜವಾಬ್ದಾರಿ. ಆದರೆ ಕೇಂದ್ರ ಸರ್ಕಾರದ ಈ ನಡೆಯನ್ನಿಟ್ಟಿರುವುದು ಪ್ರಜಾಪ್ರಭುತ್ವಕ್ಕೆ ವಿರೋಧ. ಈ ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ', ಎಂದು ಪ್ರತಿಭಟನೆಯಲ್ಲಿ ನಿರತರಾಗಿದ್ದ  ಸೋನಿಯಾ ಗಾಂಧಿ ಹೇಳಿದ್ದಾರೆ. 
 
ಸಮಾಜವಾದಿ ,ಆರ್‌ಜೆಡಿ, ಎನ್‌ಸಿಪಿ ಪಕ್ಷಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. 
 
ಅಮಾನತುಗೊಂಡ ಸಂಸದರಲ್ಲಿ ಒಬ್ಬರಾಗಿರುವ ಕೋಲಾರ್ ಸಂಸದ ಕೆ.ಹೆಚ್.ಮುನಿಯಪ್ಪ, "ಸರ್ಕಾರದ ಒತ್ತಡದ ಮೇಲೆ ಸ್ಪೀಕರ್ ಈ ನಡೆಯನ್ನಿಟ್ಟಿದ್ದಾರೆ. ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು. ಪ್ರಧಾನಿ ಮೋದಿಯವರು ಸಂಸತ್ತಿಗೆ ಬಂದು ತಮ್ಮ ಪಕ್ಷದ ಸಚಿವರ ವಿರುದ್ಧದ ವಿವಾದಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ನೀಡಬೇಕಿತ್ತು", ಎಂದು ಹೇಳಿದ್ದಾರೆ. 
 
ಕಾಂಗ್ರೆಸ್ ಸಂಸದರು ಸದನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದರೆ ಉಳಿದ ವಿರೋಧ ಪಕ್ಷಗಳು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ  ಸ್ಪೀಕರ್ ತೀರ್ಮಾನವನ್ನು ವಿರೋಧಿಸಿ ಪ್ರತಿಭಟನೆಗಿಳಿದಿದ್ದು, ರಾಜ್ಯಸಭೆಯನ್ನು 12 ಗಂಟೆಯವರೆಗೆ ಮುಂದೂಡಲಾಗಿದೆ. 
 
ಪದೇ ಪದೇ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ಮತ್ತು ಸದನದ ಒಳಗೆ ನಿಯಮಬಾಹಿರವಾಗಿ ಭಿತ್ತಿಪತ್ರಗಳನ್ನು ತರುತ್ತಿದ್ದ ಕಾಂಗ್ರೆಸ್ ಸಂಸದರಿಗೆ ಸ್ಪೀಕರ್ ಮಹಾಜನ್ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಮತ್ತೆ ನಿನ್ನೆ ಅದು ಪುನರಾವರ್ತನೆಯಾದಾಗ ಸ್ಪೀಕರ್ ಸೋಮವಾರ ಕಾಂಗ್ರೆಸ್‌ನ  25 ಸಂಸದರನ್ನು ಅಮಾನತು ಮಾಡಿದ್ದರು. 
 
ಸಂಸದರನ್ನು ಅಮಾನತುಗೊಳಿಸಿರುವ ನಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು, ಎಂದು ಕಾಂಗ್ರೆಸ್ ಹೇಳಿದರೆ, ಈ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಗಿತ್ತು, ಹಲವು ಬಾರಿ ಎಚ್ಚರಿಕೆ ನೀಡಿದರೂ ಕೇಳಿಸಿಕೊಳ್ಳಲಿಲ್ಲ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
 
ರಾಜೀವ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ 1989ರಲ್ಲಿ ಸಹ 63 ಸದಸ್ಯರನ್ನು ಸ್ಪೀಕರ್ ಅಮಾನತು ಮಾಡಿರುವ ಉದಾಹರಣೆ ಇದೆ. 

Share this Story:

Follow Webdunia kannada