ಮಣಭಾರದ ಶಾಲಾ ಬ್ಯಾಗ್ ಹೊರೆ ಹೊತ್ತು ಬೇಸತ್ತಿದ್ದ ವಿದ್ಯಾರ್ಥಿಗಳಿಬ್ಬರು ಪತ್ರಿಕಾಗೋಷ್ಠಿ ಕರೆದು ತಮ್ಮ ಅಳಲು ತೋಡಿಕೊಂಡ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.
ನಾವು ಪ್ರತಿದಿನ 8 ವಿಷಯಗಳ 16 ಪುಸ್ತಕ- ಪಟ್ಟಿಗಳನ್ನು ಹೊತ್ತೊಯ್ಯಬೇಕು. ಕೆಲವೊಮ್ಮೆ ಈ ಸಂಖ್ಯೆ 18ರಿಂದ 20ನ್ನು ದಾಟಬಹುದು. ನಮ್ಮ ಶಾಲಾ ಬ್ಯಾಗ್ ತೂಕ 5 ರಿಂದ 7 ಕೆಜಿ. ಅದನ್ನು ಹೊತ್ತುಕೊಂಡು ಮೂರನೆಯ ಮಹಡಿಯಲ್ಲಿರುವ ತರಗತಿಗೆ ಹೋಗುವವರೆಗೆ ಸುಸ್ತಾಗಿರುತ್ತೇವೆ ಎಂದು 12 ವರ್ಷದ ಬಾಲಕರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ಈ ಕುರಿತು ನಾವು ಶಾಲೆಯ ಪ್ರಾಚಾರ್ಯರಿಗೂ ಎರಡು ಬಾರಿ ಅರ್ಜಿ ಸಲ್ಲಿಸಿದ್ದೆವು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ,ಕ್ರಮ, ಭರವಸೆ ಸಿಗಲಿಲ್ಲ. ಕೆಲವೊಂದು ಮಕ್ಕಳ ಬ್ಯಾಗ್‌ನ್ನು ಹೊತ್ತೊಯ್ಯಲು ಪೋಷಕರು ಬರುತ್ತಾರೆ. ನಮ್ಮ ಕಷ್ಟಕ್ಕೆ ಮುಕ್ತಿ ಬೇಕು. ಪರಿಹಾರ ಸಿಗದಿದ್ದರೆ ನಾವು ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಬಾಂಬೈ ಹೈಕೋರ್ಟ್ ನಿರ್ದೇಶನದಂತೆ, ಶಾಲಾ ಬ್ಯಾಗ್ ತೂಕ ಕಡಿಮೆ ಮಾಡುವಂತೆ ಶಾಲೆಗಳಿಗೆ ನೋಟಿಸ್ ಜಾರಿ ಮಾಡಿದ್ದ ಮಹಾರಾಷ್ಟ್ರ ಸರ್ಕಾರ ಕಾನೂನು ಪಾಲಿಸದಿದ್ದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಖಡಕ್ ಸೂಚನೆ ನೀಡಿತ್ತು. ಆದರೂ ಮಕ್ಕಳ ದಯನೀಯ ಸ್ಥಿತಿ ದೂರವಾಗಿಲ್ಲ.