ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡಿ ಸಂಸತ್ತಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ, ಜಮ್ಮು ಕಾಶ್ಮಿರದಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದನ್ನು ಸಹಿಸದ ಅಬ್ದುಲ್ಲಾ, ಮತ್ತೆ ಘರ್ಷಣೆಯ ಸ್ಥಿತಿ ನಿರ್ಮಾಣ ಮಾಡಲು ಪಾಕಿಸ್ತಾನ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಉಗ್ರರಾದ ಹಫೀಜ್ ಸಯೀದ್, ಅಜರ್ ಮಸೂದ್‌ರಂತೆ ಉಗ್ರರ ಭಾಷೆಯಲ್ಲಿ ಮಾತನಾಡುತ್ತಿರುವ ಫಾರೂಕ್ ಅಬ್ದುಲ್ಲಾ, ಒಂದು ವೇಳೆ ಕಾಶ್ಮಿರದಲ್ಲಿ ಸಾಮಾನ್ಯ ಸ್ಥಿತಿಗೆ ಬಂದಲ್ಲಿ ಅಧಿಕಾರ ದೊರೆಯುವುದಿಲ್ಲ ಎನ್ನುವ ಆತಂಕದಲ್ಲಿ ವರ್ತಿಸುತ್ತಿದ್ದಾರೆ. ಅವರ ಮಾನಸಿಕ ಸ್ಥಿತಿ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಾರೂಕ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರೂ ಸಂಸತ್ತಿಗೆ ಗೌರವ ಕೊಡುವುದನ್ನು ಕಲಿತಿಲ್ಲ ಎಂದು ಲೇವಡಿ ಮಾಡಿದರು.
ಪಾಕ್ ಆಕ್ರಮಿತ ಕಾಶ್ಮಿರ ಭಾರತದ ಭಾಗವಾಗಿದೆ. ಮುಂಬರುವ ದಿನಗಳಲ್ಲಿ ಪಿಓಕೆ ಭಾರತದ ತೆಕ್ಕೆಗೆ ಬಂದೇ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.