ನವದೆಹಲಿ : ರಾಜ್ಯಸಭಾ ಮತ್ತು ಲೋಕಸಭೆಯ ಸಂಸದರಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಬೀಳ್ಕೊಡುಗೆ ಸಮಾರಂಭವು ಇಂದು ಸಂಸತ್ತಿನಲ್ಲಿ ನಡೆದಿದೆ.
ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಯೋಜಿಸಿದ ಬೀಳ್ಗೊಡುಗೆ ಹಾಗೂ ಔತಣಕೂಟ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೋವಿಂದ್ ಅವರು, ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಬಳಿಕ ಸುದೀರ್ಘ ಭಾಷಣ ಮಾಡಿದ ಅವರು, 5 ವರ್ಷಗಳ ಹಿಂದೆ ಇದೇ ವೇದಿಕೆಯಲ್ಲಿ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದೆ. ಇದೀಗ ಹಲವು ಸ್ಮರಣೀಯ ನೆನೆಪುಗಳನ್ನು ಹೊತ್ತು ವಿದಾಯ ಹೇಳುತ್ತಿದ್ದೇನೆ. ಎಲ್ಲ ಸಂಸದರಿಗೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದರು.
ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಭಾರತ ಶಕ್ತವಾಗಿ ಹೋರಾಟ ಮಾಡಿದ್ದು, ಕಡಿಮೆ ಸಮಯದಲ್ಲಿ 200 ಕೋಟಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಲಸಿಕೆ ಅಭಿವೃದ್ಧಿ ಪಡಿಸಿ, ಸೋಂಕು ನಿಯಂತ್ರಿಸಿದ್ದೇವೆ.
ಇದರಿಂದ ಭವಿಷ್ಯದಲ್ಲಿ ಎದುರಾಗಲು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಾರ್ಗಸೂಚಿಯನ್ನು ನಿರ್ಮಿಸಲಾಗಿದೆ. ಇದು ಅಭಿನಂದನೆಗೆ ಅರ್ಹ. ಕಷ್ಟದ ಸಮಯದಲ್ಲಿ, ಭಾರತದ ಪ್ರಯತ್ನಗಳನ್ನು ಪ್ರಪಂಚದಾದ್ಯಂತ ಶ್ಲಾಘಿಸಲಾಗಿದೆ ಎಂದು ಕೋವಿಂದ್ ತಿಳಿಸಿದರು.