ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಕೋಲ್ಕತ್ತಾ ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಯುತ್ತಿದೆ. ಈ ವೇಳೆ ಸಂದೀಪ್ ಘೋಷ್ ಮೇಲೆ ಅನುಮಾನ ಮೂಡಿದೆ. ಆರ್ ಜಿ ಕರ್ ಆಸ್ಪತ್ರೆಯಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂಬುದು ಬೆಳಕಿಗೆ ಬಂದಿದೆ.
ಈ ಸಂಬಂಧ ಸಿಬಿಐ ಈಗಾಗಲೇ ಸಂದೀಪ್ ಘೋಷ್ ರನ್ನು ವಶಕ್ಕೆ ಪಡೆದಿದೆ. ಇದರ ಬೆನ್ನಲ್ಲೇ ಈಗ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಡಿ ಅವರ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಸಂದೀಪ್ ಘೋಷ್ ರನ್ನು 10 ದಿನಗಳ ಕಾಲ ಸಿಬಿಐ ವಶಕ್ಕೊಪ್ಪಿಸಲಾಗಿದೆ.
ಇನ್ನು, ಸಂದೀಪ್ ಘೋಷ್ ಮೇಲೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕೋರ್ಟ್ ಗೆ ಹಾಜರುಪಡಿಸುವಾಗ ಅವರ ಮೇಲೆ ದಾಳಿ ನಡೆದಿದೆ. ವೈದ್ಯೆಯ ಹತ್ಯೆ ಪ್ರಕರಣಕ್ಕೆ ಈ ಅವ್ಯವಹಾರಗಳೇ ಕಾರಣವಾಗಿರಬಹುದೇ ಎಂಬ ದೃಷ್ಟಿಯಿಂದಲೂ ತನಿಖೆ ನಡೆಸಲಾಗುತ್ತಿದೆ. ವೈದ್ಯೆ ಹತ್ಯೆ ನಡೆದ ಮರುದಿನವೇ ಸೆಮಿನಾರ್ ಹಾಲ್ ನವೀಕರಣಕ್ಕೆ ಸಂದೀಪ್ ಘೋಷ್ ಆದೇಶಿಸಿದ್ದರು ಎನ್ನಲಾಗಿತ್ತು. ಈ ವಿಚಾರಗಳೆಲ್ಲವೂ ಅವರ ಮೇಲೆ ಅನುಮಾನಪಡುವಂತೆ ಮಾಡಿದೆ.