Select Your Language

Notifications

webdunia
webdunia
webdunia
webdunia

ವಿವಾಹವಾಗುವುದಾಗಿ ನಂಬಿಸಿ ವೈದ್ಯೆಗೆ 48 ಲಕ್ಷ ರೂಪಾಯಿಗಳನ್ನು ವಂಚಿಸಿದ ಭೂಪ

ವಿವಾಹವಾಗುವುದಾಗಿ ನಂಬಿಸಿ ವೈದ್ಯೆಗೆ 48 ಲಕ್ಷ ರೂಪಾಯಿಗಳನ್ನು ವಂಚಿಸಿದ ಭೂಪ
ಗುರ್ಗಾಂವ್ , ಸೋಮವಾರ, 6 ಜುಲೈ 2015 (18:11 IST)
ಇದೊಂದು ಕ್ಲಾಸ್ ವಂಚನೆ, ಇಂಗ್ಲೆಂಡ್‌ ಮೂಲದ ವೈದ್ಯನೊಬ್ಬ ಭಾರತೀಯ ವೈದ್ಯೆಯೊಬ್ಬಳಿಗೆ ವೈವಾಹಿಕ ಮ್ಯಾಟ್ರಿಮೋನಿಯಲ್‌ನಲ್ಲಿ ಭೇಟಿಯಾಗಿ 48 ಲಕ್ಷ ರೂಪಾಯಿಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ.   
 
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಹೈದ್ರಾಬಾದ್ ಮೂಲದ ವೈದ್ಯೆ ಶಾಲಿನಿ(ಹೆಸರು ಬದಲಾಯಿಸಲಾಗಿದೆ) ಕಳೆದ ನವೆಂಬರ್ ತಿಂಗಳಲ್ಲಿ ವೈವಾಹಿಕ ವೆಬ್‌ಸೈಟ್‌ನಲ್ಲಿ ಅಭಿಷೇಕ್ ಮೋಹನ್ ಎಂಬಾತನನ್ನು ಭೇಟಿ ಮಾಡಿ ನಂತರ ಚಾಟಿಂಗ್‌ ಆರಂಭಿಸಿದ್ದಳು.  
 
ನಾನೊಬ್ಬ ಅನಿವಾಸಿ ಭಾರತೀಯನಾಗಿದ್ದು, ಬ್ರಿಟನ್ ಸೇನೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸದ್ಯ ಇರಾಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇಂಗ್ಲೆಂಡ್ ಮೊಬೈಲ್ ಸಂಖ್ಯೆಯಿಂದ ಅಥವಾ ಇಂಟರ್‌ನ್ಯಾಷನಲ್ ರೋಮಿಂಗ್‌ ಆಗದಿರಲು ಭಾರತದ ಮೊಬೈಲ್ ಸಂಖ್ಯೆಯಿಂದ ಕರೆ ಮಾಡುತ್ತೇನೆ ಎಂದು ವೈದ್ಯೆ ಶಾಲಿನಿಯನ್ನು ನಂಬಿಸಿದ್ದ. ಸುಮಾರು ಒಂದು ತಿಂಗಳ ಪರಿಚಯದ ನಂತರ ಆತನನ್ನ ವಿವಾಹ ನಿರ್ಧಾರಕ್ಕೆ ಶಾಲಿನಿ ಬಂದಿದ್ದಳು. 
 
ಕೆಲ ದಿನಗಳ ನಂತರ ಇಂಗ್ಲೆಂಡ್ ವೈದ್ಯರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವ ಭಾರಿ ವೆಚ್ಚದ ಕಿಟ್ ಖರೀದಿಸಿದ್ದೇನೆ. ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕೆ ಇರಾಕ್ ಸರಕಾರ ಚಿನ್ನಾಭರಣಗಳನ್ನು ಉಡುಗೊರೆಯಾಗಿ ನೀಡಿದೆ ಎಂದು ಮೋಹನ್ ಬೊಗಳೆ ಬಿಟ್ಟಿದ್ದ   
 
ಕೆಲ ತಿಂಗಳುಗಳ ನಂತರ ಮೋಹನ್ ವೈದ್ಯೆ ಶಾಲಿನಿಯ ಮುಂದೆ ವಿವಾಹದ ಪ್ರಸ್ತಾಪವನ್ನಿಟ್ಟು, 2015 ಏಪ್ರಿಲ್‌‌ ತಿಂಗಳಲ್ಲಿ ಭೇಟಿಯಾಗುವುದಾಗಿ ತಿಳಿಸಿದ್ದ. ನಾನು ನನ್ನ ಸಂಬಂಧಿಕರನ್ನು ನಂಬುವದಿಲ್ಲವಾದ್ದರಿಂದ ನಿನ್ನ ವಿಳಾಸಕ್ಕೆ ಚಿನ್ನಾಭರಣ, ವೈದ್ಯಕೀಯ ಉಪಕರಣಗಳು ಮತ್ತು ಐದು ಕೋಟಿ ರೂಪಾಯಿಗಳನ್ನು ಕಳುಹಿಸುತ್ತಿರುವುದಾಗಿ ಹೇಳಿದ್ದ ಎನ್ನಲಾಗಿದೆ. 
 
ಮೋಹನ್‌ನಿಂದ ಏಪ್ರಿಲ್ ದಿನಾಂಕ 7 ರಂದು ಪಾರ್ಸಲ್ ತಲುಪಬೇಕಾಗಿತ್ತು. ಅದೇ ದಿನದಂದು ವ್ಯಕ್ತಿಯೊಬ್ಬ ಕರೆ ಮಾಡಿ ತಾನು ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಯಾಗಿದ್ದು, ಕೋಟಿ ಕೋಟಿ ರೂಪಾಯಿಗಳ ಮೌಲ್ಯದ ಪಾರ್ಸಲ್‌ನ್ನು ಶುಲ್ಕ ಪಾವತಿಸದೆ ಕಳುಹಿಸಲು ಸಾಧ್ಯವಿಲ್ಲ ಎಂದು ಶಾಲಿನಿಗೆ ಹೇಳಿದ್ದಾನೆ.
 
ಕೆಲ ಗಂಟೆಗಳ ನಂತರ ಮೋಹನ್, ಶಾಲಿನಿಗೆ ಕರೆ ಮಾಡಿ ಪಾರ್ಸಲ್ ಶುಲ್ಕ ಪಾವತಿಗಾಗಿ 20 ಲಕ್ಷ ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾಯಿಸುವಂತೆ ಕೋರಿದ್ದಾನೆ.  
 
20 ಲಕ್ಷ ರೂಪಾಯಿಗಳನ್ನು ಕಳುಹಿಸಿದ ನಂತರ ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿದ್ದ ವ್ಯಕ್ತಿ, ಮತ್ತಷ್ಟು ಹಣವನ್ನು ಪಾವತಿಸುವಂತೆ ಶಾಲಿನಿಗೆ ಒತ್ತಡ ಹೇರುತ್ತಿದ್ದ. ಒತ್ತಡದಿಂದ ಬೇಸತ್ತು ಒಟ್ಟು 48 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾಳೆ.  
 
ಘಟನೆಯ ಬಗ್ಗೆ ಮೋಹನ್‌ಗೆ ಮೊಬೈಲ್ ಕರೆ ಮಾಡಿದಾಗ ಫೋನ್ ಸಿವ್ಚ್ ಆಫ್ ಬಂದಿದೆ. ನಂತರ ಶಾಲಿನಿ ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ತನ್ನ ಹೆಸರಿನಲ್ಲಿ ಪಾರ್ಸಲ್ ಬಂದಿರುವ ಬಗ್ಗೆ ವಿಚಾರಿಸಿದ್ದಾಳೆ. ಆದರೆ, ಅವರ ಹೆಸರಿನಲ್ಲಿ ಯಾವುದೇ ಪಾರ್ಸಲ್ ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
 
ಇದರಿಂದ ಆತಂಕಗೊಂಡ ಶಾಲಿನಿ ಹೈದ್ರಾಬಾದ್‌ನ ಕ್ರೈಮ್ ಬ್ರ್ಯಾಂಚ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಂತರ ದೂರು ದೆಹಲಿ ಪೊಲೀಸರ ವಿಶೇಷ ವಿಭಾಗಕ್ಕೆ ವರ್ಗಾಯಿಸಲಾಗಿದೆ. ದೆಹಲಿ ಪೊಲೀಸರ ತಂಡ ಕೈಲಾಶ್ ಸಿಂಗ್ ಬಾಸಿತ್ ಮತ್ತು ಉಮೇಶ್ ಬರ್ಥವಾಲ್ ಸೇರಿದೆಂತೆ ಒಬ್ಬ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. 
 
ಆರೋಪಿಗಳಾದ ನೈಜೆರಿಯಾ ಮೂಲದ ಜೋಸೆಫ್ ಭಾಹೆಮೆನ್(26), ಬಾವೋ ಹಿಲರಿ ಒಮಗ್‌ಬೆಮಿ(35) ಮತ್ತು ನಾಗಾಲ್ಯಾಂಡ್ ಮೂಲದ ಲೆನಿಯಾ ಮಾಘ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ.
 
ಆರೋಪಿ ಅಭಿಷೇಕ್ ಮೋಹನ್ ಅಂದಾಜು 192 ಯುವತಿಯರಿಗೆ ವಿವಾಹದ ಪ್ರಸ್ತಾಪವನ್ನಿಟ್ಟು ವಂಚಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 

Share this Story:

Follow Webdunia kannada