Select Your Language

Notifications

webdunia
webdunia
webdunia
webdunia

ಗ್ಲುಕೋಸ್ ಬದಲು ಗರ್ಭಪಾತದ ಮಾತ್ರೆ : 8 ತಿಂಗಳ ಗರ್ಭಕ್ಕೆ ಕುತ್ತು

ಗ್ಲುಕೋಸ್ ಬದಲು ಗರ್ಭಪಾತದ ಮಾತ್ರೆ : 8 ತಿಂಗಳ ಗರ್ಭಕ್ಕೆ ಕುತ್ತು
ಜಮ್ಮು , ಸೋಮವಾರ, 28 ಜುಲೈ 2014 (09:33 IST)
ಇತ್ತೀಚಿಗೆ ವೈದ್ಯರ ನಿರ್ಲಕ್ಷದಿಂದ ಆಗುತ್ತಿರುವ ಅನಾಹುತಗಳ ವರದಿ ಸಾಮಾನ್ಯವಾಗಿ ಬಿಟ್ಟಿದೆ. ಜೀವರಕ್ಷಕರೆಂದು ಕರೆಸಿಕೊಳ್ಳುತ್ತಿದ್ದ ವೈದ್ಯರೀಗಿಗ ಜೀವ ಭಕ್ಷಕರಾಗುತ್ತಿದ್ದಾರೆ. ಅದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಜಮ್ಮುವಿನಲ್ಲೊಬ್ಬ ವೈದ್ಯ ತಾಯಿಯೊಬ್ಬಳ ತಾಯ್ತನವನ್ನೇ ಕಿತ್ತುಕೊಂಡಿದ್ದಾನೆ. ಇನ್ನೊಂದು ತಿಂಗಳಲ್ಲಿ ಹೊರ ಜಗತ್ತಿಗೆ ಬರಲಿದ್ದ ಕೂಸನ್ನು ಕಾಣದ ಲೋಕಕ್ಕೆ ಕಳುಹಿಸಿದ್ದಾನೆ.  ಅಷ್ಟಕ್ಕೂ ಆತ ಮಾಡಿದ್ದೇನು ಅಂತೀರಾ...ಗ್ಲುಕೋಸ್ ನೀಡುವ ಬದಲು ಗರ್ಭಪಾತದ ಮಾತ್ರೆಯನ್ನು ನೀಡಿ 8 ತಿಂಗಳ ಗರ್ಭದ ಪ್ರಾಣವನ್ನೇ ಹೀರಿ ಬಿಟ್ಟಿದ್ದಾನೆ ಆತ. 

8 ತಿಂಗಳ ತುಂಬು ಗರ್ಭಿಣಿ  ಶ್ರುತಿ ಶರ್ಮಾ ಎಂದಿನಂತೆ ರೆಗ್ಯುಲರ್ ಚೆಕ್ ಅಪ್‌ಗೆಂದು ನಗರದಲ್ಲಿರುವ ಖಾಸಗಿ ಆಸ್ಪತ್ರೆ  ಜಿಕೆ ಮೆಡಿಸಿಟಿಗೆ ಭೇಟಿ ನೀಟಿ ವೈದ್ಯೆಯನ್ನು ಭೇಟಿಯಾದರು. ಆ ವೈದ್ಯರು ಆಕೆಗೆ ಗ್ಲುಕೋಸ್ ಮಾತ್ರೆ ನೀಡುವಂತೆ ತಮ್ಮ ಸಹೋದ್ಯೋಗಿ ವೈದ್ಯರ ಬಳಿ ಹೇಳಿದರು. ಆದರೆ ಆ ವೈದ್ಯ ಮತ್ತು ಇಬ್ಬರು ನರ್ಸ್‌ಗಳು ನಿರ್ಲಕ್ಷದಿಂದ ಬೇರೆ ಮಹಿಳೆಗೆ ನೀಡಬೇಕಿದ್ದ ಗರ್ಭಪಾತದ ಮಾತ್ರೆಯನ್ನು ಶ್ರುತಿ ಶರ್ಮಾರಿಗೆ ನೀಡಿದ್ದಾರೆ. ಅದನ್ನು ಸೇವಿಸಿದ ಆಕೆ ಮನೆಗೆ ಮರಳಿದ್ದಾಳೆ. 
 
ಮನೆಗೆ ತಲುಪುತ್ತಿದ್ದಂತೆ ಸಹಿಸಲಾಗದ ಹೊಟ್ಟೆ ನೋವು ಪ್ರಾರಂಭವಾಗಿದೆ. ತಕ್ಷಣ ಆಕೆಯ ಪತಿ ರಾಕೇಶ್ ಶರ್ಮಾ ಅದೇ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ತಕ್ಷಣ ಆಕೆಯನ್ನು ಪರೀಕ್ಷಿಸಲಾಯಿತು. ಆದರೆ ಅನಾಹುತ ನಡೆದೇ ಹೋಗಿತ್ತು. ಅದಾಗಲೇ ಆಕೆಯ ಹೊಟ್ಟೆಯಲ್ಲಿದ್ದ ಮಗು ಕೊನೆಯುಸಿರೆಳೆದಿತ್ತು. 
 
ನಂತರ ಮಗು ಸಾಯಲು ಕಾರಣವೇನೆಂದು ಬೆಳಕಿಗೆ ಬಂದಿದೆ.  ಈ ಕುರಿತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೈದ್ಯರು ತನಿಖೆ ನಡೆಸುತ್ತಿದ್ದಾರೆ.  ಎಚ್ಚೆತ್ತುಕೊಂಡಿರುವ ಸರಕಾರ ಆಸ್ಪತ್ರೆಗೆ ನೀಡಲಾಗಿದ್ದ ಲೈಸೆನ್ಸ್ ರದ್ದುಗೊಳಿಸಿದೆ.
 
ಇನ್ನೂ ಕಾಣದ ಕೂಸಿನ ಪುಟ್ಟ ಕಾಲಿನಿಂದ ಒದೆತದ ಅವರ್ಣನೀಯ ಅನುಭೂತಿಯಲ್ಲಿ ತೇಲುತ್ತಿದ್ದ, ಇನ್ನೊಂದು ತಿಂಗಳಲ್ಲಿ ಅಮ್ಮನಾಗಲಿದ್ದ ಆ ತಾಯಿಯ ಕೂಸು ಉಸಿರಿಲ್ಲದೇ ಧರೆಗುರುಳಿದೆ... ಆಕೆಯ ಕರುಳಿನ ಕಂಬನಿಗೆ ಉತ್ತರ ನೀಡುವವರಾರು??

Share this Story:

Follow Webdunia kannada