Select Your Language

Notifications

webdunia
webdunia
webdunia
webdunia

'ಪಿಕೆ'ಯಲ್ಲಿ ಪೊಲೀಸರಿಗೆ ಅವಮಾನ; ಆಮೀರ್‌ಗೆ ಸಂಕಷ್ಟ

'ಪಿಕೆ'ಯಲ್ಲಿ ಪೊಲೀಸರಿಗೆ ಅವಮಾನ; ಆಮೀರ್‌ಗೆ ಸಂಕಷ್ಟ
ನವದೆಹಲಿ , ಸೋಮವಾರ, 3 ಆಗಸ್ಟ್ 2015 (15:52 IST)
ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಂಡು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ರಾಜ್‌ಕುಮಾರ್ ಹಿರಾನಿಯವರ, ಆಮೀರ್ ಖಾನ್ ಮುಖ್ಯ ಭೂಮಿಕೆಯ ಪಿಕೆ ಚಿತ್ರ ಹಲವಾರು ಕಾರಣಗಳಿಂದ ಹಿಂದೆ ಸುದ್ದಿಯಾಗಿತ್ತು. ಈಗಲೂ ಸುದ್ದಿಯಾಗುತ್ತಲೇ ಇದೆ. ವಿವಾದಗಳೇ ಬಹುಶಃ ಪಿಕೆ ಸಿನಿಮಾ ಈ ಪರಿಯಲ್ಲಿ ಗೆಲುವು ಸಾಧಿಸಲು ಸಹಾಯಕವಾಗಿರಬೇಕು. 

ಹಿಂದಿ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ ಈ ಬ್ಲಾಕ್‌ಬಸ್ಟರ್ ಸಿನಿಮಾ ತನ್ನ ಕಥಾ ವಸ್ತು ವಿಷಯಗಳಿಂದಾಗಿ ಹಲವಾರು ಧಾರ್ಮಿಕ ಗುಂಪುಗಳ ವಿರೋಧವನ್ನು ಕಟ್ಟಿಕೊಂಡಿದೆ. 
 
ಸಿನಿಮಾದ ಪ್ರಥಮ ಪೋಸ್ಟರ್‌ನಲ್ಲಿ ಆಮೀರ್ ಖಾನ್ ರೇಡಿಯೋದಿಂದ ಒಳಾಂಗಗಳನ್ನು ಮುಚ್ಚಿಕೊಂಡು ನಗ್ನರಾಗಿ ಕಾಣಿಸಿಕೊಂಡಿದ್ದು ವಿವಾದವಾಗಿ ತಲೆ ಎತ್ತಿತ್ತು.  ತದನಂತರ ಕೂಡ ಸಿನಿಮಾಗೆ ಸಂಬಂಧಿಸಿದಂತೆ ಎದ್ದ ಹಲವಾರು ವಿವಾದಗಳು ಆಮೀರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.  ಹಳೆಯ ವಿವಾದಗಳೇ ಮತ್ತೆ ಮತ್ತೆಸುತ್ತಾಡುತ್ತಿದ್ದರೂ ಎಲ್ಲವೂ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. 
 
ಆದರೆ  ಆಮೀರ್ ಅವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ದೆಹಲಿ ಮೂಲದ ಓರ್ವ ಸಾಕ್ಷ್ಯಚಿತ್ರ ಚಲನಚಿತ್ರೋದ್ಯಮಿ, ಪಿ.ಕೆ. ಚಿತ್ರದಲ್ಲಿ ಪೋಲೀಸರ ವಿರುದ್ಧ ಅವಹೇಳನಕಾರಿ ಪದ 'ಥುಲ್ಲಾ' ಅನ್ನು ಬಳಸಲಾಗಿದೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
"ಆಮಿರ್ ತಮ್ಮ ಸಿನಿಮಾದಲ್ಲಿ ಬಳಸಿದ ಪದ ಅವಹೇಳನಕಾರಿಯೋ ಅಥವಾ ಅಲ್ಲವೋ ಎಂಬುದರ ಕುರಿತೇನು ಚರ್ಚೆ ನಡೆಯುತ್ತಿಲ್ಲ. ಆದರೆ ನನಗೆದುರಾಗಿರುವ ಪ್ರಶ್ನೆ ಏನೆಂದರೆ  ಆ ಪದವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಳಸಿದರೆ ಪೊಲೀಸ್ ಅಧಿಕಾರಿಗಳ ಮನಸ್ಸಿಗೆ ಘಾಸಿಯಾಗುತ್ತದೆ. ಆದರೆ ಆಮಿರ್  ಅದೇ ಪದವನ್ನು ಬಳಸಿದರೆ ಭಾವನಾತ್ಮಕ ನೋವಿನ ಪ್ರಶ್ನೆ ಎದುರಾಗುವುದಿಲ್ಲವೇ? ಪಿ.ಕೆ.ಯಲ್ಲಿ ಈ ಪದವನ್ನು ಬಳಸಲಾಗಿದೆ ಮತ್ತು  ಕೇಜ್ರಿವಾಲ್  ಅವರು ಸುದ್ದಿ ಚಾನಲ್ ಒಂದಕ್ಕೆ ಸಂದರ್ಶನ ನೀಡಿ ಈ ಪದವನ್ನು ಬಳಕೆ ಮಾಡಿದ್ದಕ್ಕಿಂತ ಬಹಳ ದಿನಗಳ ಮೊದಲೇ ಸಿನಿಮಾ ಬಿಡುಗಡೆ ಕೂಡ ಆಗಿದೆ", ಎಂದು ಉಲ್ಲಾಸ್ ಅನ್ನುವವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. 

Share this Story:

Follow Webdunia kannada