Select Your Language

Notifications

webdunia
webdunia
webdunia
webdunia

ರಾಷ್ಟ್ರಪತಿ ವಿರುದ್ಧ ಲಲಿತ್ ಟ್ವೀಟ್ ಪ್ರಕರಣ: ಕಾನೂನು ಸಲಹೆ ಅಪೇಕ್ಷಿಸಿರುವ ದೆಹಲಿ ಪೊಲೀಸ್

ರಾಷ್ಟ್ರಪತಿ ವಿರುದ್ಧ ಲಲಿತ್ ಟ್ವೀಟ್ ಪ್ರಕರಣ: ಕಾನೂನು ಸಲಹೆ ಅಪೇಕ್ಷಿಸಿರುವ  ದೆಹಲಿ ಪೊಲೀಸ್
ನವದೆಹಲಿ , ಸೋಮವಾರ, 6 ಜುಲೈ 2015 (16:52 IST)
ಲಲಿತ್ ಮೋದಿ ವಿರುದ್ಧ ರಾಷ್ಟ್ರಪತಿಭವನದಿಂದ ನೀಡಲಾಗಿರುವ ದೂರಿಗೆ ಸಂಬಂಧಿಸಿದಂತೆ ಮುಂದಿನ ನಡೆ ಇಡಲು ದೆಹಲಿ ಪೊಲೀಸ್ ಕಾನೂನು ಸಲಹೆಯನ್ನು ಬಯಸಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ಅವಮಾನವಾಗುವ ತೆರದಲ್ಲಿ ಲಲಿತ್ ಮೋದಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ರಾಷ್ಟ್ರಪತಿ  ಕಚೇರಿಯಿಂದ ದೂರು ದಾಖಲಾಗಿತ್ತು.
 
ಹಗರಣದ ಆರೋಪಿಯಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮೋದಿ, "ಕೇಂದ್ರ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಒಡೆತನದ ಕೊಚ್ಚಿ ಟಸ್ಕರ್ಸ್ ಕೇರಳ ಮಾಲೀಕತ್ವದ ವಿವಾದದಲ್ಲಿ ಅವರ ಪಾತ್ರದ ಬಗ್ಗೆ ನಾನು ಬಹಿರಂಗಪಡಿಸಿದ್ದೆ. ಅದಕ್ಕೆ ಪ್ರತೀಕಾರವಾಗಿ ಆಗ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ ನನ್ನ ವಿರುದ್ಧ ತನಿಖೆಗೆ ಆದೇಶ ನೀಡಿದ್ದರು. ತಾನು ಐಪಿಎಲ್ ಮುಖ್ಯಸ್ಥನಾಗಿದ್ದ ಸಂದರ್ಭದಲ್ಲಿ ತನ್ನ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಎತ್ತಿ ಕಟ್ಟುತ್ತಿದ್ದರು", ಎಂದು ರಾಷ್ಟ್ರಪತಿಗಳ ವಿರುದ್ಧ ಆರೋಪ ಮಾಡಿದ್ದರು. 
 
ಅಲ್ಲದೇ ರಾಷ್ಟ್ರಪತಿಯವರ ಸೆಕ್ರೆಟರಿ ಒಮಿತಾ ಪೌಲ್‌ಗೆ ಹವಾಲಾ ಮಧ್ಯವರ್ತಿ ನಾಗ್‌ಪಾಲ್ ಜತೆ ಸಂಪರ್ಕವಿದೆ ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದರು. ಈ ಆರೋಪವನ್ನು ಖಂಡಿಸಿ ರಾಷ್ಟ್ರಪತಿ ಭವನ ದೂರ ನೀಡಿದೆ. ಲಲಿತ್ ಮೋದಿ ಟ್ವೀಟ್‌ನ ಪ್ರತಿಯನ್ನೂ ದೂರಿನೊಂದಿಗೆ ಸಲ್ಲಿಸಲಾಗಿದೆ.
 
ಜೂನ್ 23 ಮತ್ತು ಜೂನ್ 25 ರಂದು ಲಲಿತ್ ಮೋದಿ ಮಾಡಿರುವ ಟ್ವೀಟ್‌ಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಭವನದಿಂದ ಶನಿವಾರ ದೂರು ದಾಖಲಾಗಿದೆ ಎಂಬುದನ್ನು ವಿಶೇಷ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ದೀಪಕ್ ಮಿಶ್ರಾ ಖಚಿತ ಪಡಿಸಿದ್ದು, ಇದನ್ನು ಆರ್ಥಿಕ ಅಪರಾಧಗಳಡಿ ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದಾರೆ, 
 
ಆದರೆ ಈ ಕುರಿತು ಎಫ್ಐಆರ್ ದಾಖಲಾಗಿಲ್ಲ ಎಂದು ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿರುವ ದೆಹಲಿ ಪೊಲೀಸ್, ಲಲಿತ್ ಟ್ವಿಟರ್ ಪೇಜ್ ಬ್ಲಾಕ್ ಮಾಡಲು ನ್ಯಾಯಾಲಯದ ಸಲಹೆಯನ್ನು  ಪರಿಗಣಿಸುವುದಾಗಿ ಹೇಳಿದೆ.

Share this Story:

Follow Webdunia kannada