ನವದೆಹಲಿ : ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಮಾತನಾಡಿದ್ದ ಮಾಜಿ ಕಾಂಗ್ರೆಸ್ ನಾಯಕ, ಹಿರಿಯ ವಕೀಲ, ಪ್ರಸ್ತುತ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಾಗುವ ಸಾಧ್ಯತೆಯಿದೆ.
ವಕೀಲರಾದ ವಿನೀತ್ ಜಿಂದಾಲ್ ಮತ್ತು ಶಶಾಂಕ್ ಶೇಖರ್ ಝಾ ಅವರು, ಭಾರತೀಯ ನ್ಯಾಯಾಂಗದ ವಿರುದ್ಧ ಹೇಳಿಕೆ ನೀಡಿ ಘನತೆಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಒಪ್ಪಿಗೆ ನೀಡುವಂತೆ ಭಾರತದ ಅಟಾರ್ನಿ ಜನರಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗದ ವಿರುದ್ಧ ಸಿಬಲ್ ಮಾಡಿದ ಟೀಕೆಗಳ ಬಗ್ಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ಕೂಡ ಟೀಕಿಸಿದೆ. ಹಿರಿಯ ವಕೀಲ ಮತ್ತು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಕಪಿಲ್ ಸಿಬಲ್ ಅವರು ಇಂತಹ ಹೇಳಿಕೆ ನೀಡಿರುವುದು ಅತ್ಯಂತ ದುರದೃಷ್ಟಕರ.
ಅವರು ಕಾನೂನು ಕ್ಷೇತ್ರದ ಧೀಮಂತರು ಮತ್ತು ದೇಶದ ಮಾಜಿ ಕಾನೂನು ಸಚಿವರೂ ಆಗಿದ್ದಾರೆ. ಎರಡು, ಮೂರು ಪ್ರಕರಣದಲ್ಲಿ ಸೋತಿದ್ದಕ್ಕೆ ನ್ಯಾಯಾಂಗವನ್ನು ಗುರಿಯಾಗಿ ಮಾತನಾಡುವುದು ಸರಿಯಲ್ಲ. ನ್ಯಾಯಾಂಗವು ಮುಕ್ತ ಮತ್ತು ಸ್ವತಂತ್ರ ಸಂಸ್ಥೆಯಾಗಿದೆ. ಅದರ ಮೇಲೆ ದಾಳಿ ಮಾಡಬಾರದು ಎಂದು ಹೇಳಿದ್ದಾರೆ.