ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ನಮ್ಮ ವಿರುದ್ಧ ಸಂಚು ನಡೆಸಿದ್ದಲ್ಲದೇ ನಿಯಮಗಳನ್ನು ಮೀರಿ ವರ್ತಿಸಿದ್ದರಿಂದ ಅವರನ್ನು ಪಕ್ಷದಿಂದ ಉಚ್ಚಾಟಿಸುವುದು ಅನಿವಾರ್ಯವಾಗಿತ್ತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಆಪ್ ಪಕ್ಷದ ಬಂಡಾಯ ನಾಯಕರ ವಿರುದ್ಧ ಅವಹೇಳನಕಾರಿ ಶಬ್ದಗಳನ್ನು ಬಳಸಿದ್ದಕ್ಕೆ ಕ್ಷಮೆಯಿರಲಿ. ಕೋಪದ ಭರದಲ್ಲಿ ಆ ರೀತಿ ಮಾತನಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಮುಂಬರುವ ದಿನಗಳಲ್ಲಿ ಕೋಪಕ್ಕೆ ಕಡಿವಾಣ ಹಾಕುವುದಾಗಿ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡ ಅಶುತೋಷ್ ಬರೆದ ದಿ ಕ್ರೌನ್ ಪ್ರಿನ್ಸ್ , ದಿ ಗ್ಲಾಡಿಯೇಟರ್ ಆಂಡ್ ದಿ ಹೋಪ್ ಎನ್ನುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೇಜ್ರಿವಾಲ್ ಮಾತನಾಡುತ್ತಿದ್ದರು.
ಪಕ್ಷದಲ್ಲಿ ಭಿನ್ನಮತಿಯ ಚಟುವಟಿಕೆಗಳನ್ನು ನಡೆಸುತ್ತಿರುವವರಿಗೆ ಉಚ್ಚಾಟನೆ ಖಚಿತ. ಪಕ್ಷವನ್ನು ಒಡೆಯುವ ದ್ರೋಹಿಗಳನ್ನು ಯಾವತ್ತು ಕ್ಷಮಿಸಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.
ಅಶುತೋಷ್ , ಮನೀಷ್ ಸಿಸೋಡಿಯಾ ಮತ್ತು ಕುಮಾರ್ ವಿಶ್ವಾಸ್ ತಮ್ಮ ಜೀವನವನ್ನೇ ಪಕ್ಷಕ್ಕಾಗಿ ಪಣಕ್ಕಿಟ್ಟಿದ್ದಾರೆ. ಇವತ್ತಿನವರೆಗೂ ಯಾವುದೇ ಅಧಿಕಾರ ಬಯಸಿದವರಲ್ಲ. ನಾಲ್ಕು ಗೋಡೆಗಳ ಮಧ್ಯೆ ನಾವು ಪರಸ್ಪರ ವಾಗ್ವಾದದಲ್ಲಿ ತೊಡಗುತ್ತೇವೆ. ಆದರೆ, ಹೊರಗಡೆ ಬಂದಾಗ ನಾವು ಒಂದು ತಂಡದಂತೆ ವರ್ತಿಸಬೇಕು. ನಿಯಮಗಳನ್ನು ಮೀರಿದಲ್ಲಿ ತುಂಬಾ ನೋವಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.