ಸಿಎಂ ಸಿದ್ದರಾಮಯ್ಯನವರ ಮೇಲೆ ಮುನಿಸಿಕೊಂಡು ಪಕ್ಷ ತೊರೆಯಲು ಹೊರಟಿರುವ ವಿ. ಶ್ರೀನಿವಾಸ ಪ್ರಸಾದ್ ಅವರ ಮನವೊಲಿಸಲು ಕಾಂಗ್ರೆಸ್ ನಾಯಕರು ತಯಾರಿ ನಡೆಸಿದ್ದಾರೆ.
ಇಂದು ಬೆಂಗಳೂರಿಗೆ ಬರುತ್ತಿರುವ ಪ್ರಸಾದ್ ಅವರನ್ನು ಡಾಲರ್ಸ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಲು ಕೆಪಿಸಿಸಿ ನಾಯಕರು ಮುಂದಾಗಿದ್ದಾರೆ. ರಾಜ್ಯಸಭಾ ಸದಸ್ಯ, ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ನೇತೃತ್ವದಲ್ಲಿ ಕೈ ನಾಯಕರು ಇಂದು ಪ್ರಸಾದ್ ಭೇಟಿಗೆ ತೆರಳಲಿದ್ದಾರೆ.
ಸಚಿವ ಸ್ಥಾನ ಕಳೆದುಕೊಂಡ ಸಂದರ್ಭದಲ್ಲಿ ಆಸ್ಕರ್ ಫರ್ನಾಂಡಿಸ್ ಸೇರಿದಂತೆ ಕೆಲ ಕೈ ನಾಯಕರು ಪ್ರಸಾದ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಆದರೆ ಅವರು ಯಾರ ಭೇಟಿಗೂ ಒಲವನ್ನು ವ್ಯಕ್ತ ಪಡಿಸಿರಲಿಲ್ಲ.
ಶುಕ್ರವಾರ ಮೈಸೂರಿನಲ್ಲಿ ಮಾತನಾಡುತ್ತಿದ್ದ ಪ್ರಸಾದ್ ನಾನು ಕಾಂಗ್ರೆಸ್ ಪಕ್ಷ ತೊರೆಯುವುದು ಶತಃ ಸಿದ್ಧ, ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಗುಡ್ ಬೈ ಹೇಳುತ್ತೇನೆ. ಇಲ್ಲಿ ಎಲ್ಲವೂ ಮುಗಿದು ಹೋಗಿದೆ. ಪಕ್ಷದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ಮನಸ್ಸಿದೆ ತುಂಬಾ ನೋವಾಗಿದೆ ಎಂದು ತಮ್ಮ ಒಳಗಿನ ಬೇಗುದಿಯನ್ನು ಹೊರ ಹಾಕಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ಧ ರೂಪಿಸಿದ್ದ ಷಡ್ಯಂತ್ರದ ಕಾರಣದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನೇರವಾಗಿ ಆರೋಪಿಸಿ, ಅಕ್ಟೋಬರ್ 17 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿರ್ಧರಿಸಿದ್ದಾರೆ.
ಸ್ಪೀಕರ್ ಕೆ.ಬಿ. ಕೋಳಿವಾಡ್ ಅವರ ಭೇಟಿಗೆ ಈಗಾಗಲೇ ಸಮಯ ನಿಗದಿಯಾಗಿದ್ದು ಸೋಮವಾರ 11 ಗಂಟೆಗೆ ಪ್ರಸಾದ್ ಸ್ಪೀಕರ್ ಕೈಗೆ ರಾಜೀನಾಮೆ ಹಸ್ತಾಂತರಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ