ನವದೆಹಲಿ: ರಾಜ್ಯಕ್ಕೆ ನಬಾರ್ಡ್ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದ್ದ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ದಾಖಲೆಗಳನ್ನು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಇಂದು ಬೆಳಿಗ್ಗೆಯೇ ದೆಹಲಿಗೆ ತಲುಪಿದ್ದು, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮೊದಲು ಮುಡಾ ಹಗರಣದ ಬಗ್ಗೆ ಚರ್ಚಿಸಲು ತಮ್ಮ ವಕೀಲ ಅಭಿಷೇಕ್ ಮನು ಸಿಂಘ್ವಿಯವರನ್ನು ಭೇಟಿಯಾಗಿರುವ ಸಿದ್ದರಾಮಯ್ಯ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದಾರೆ.
ಈ ವೇಳೆ ಅವರ ಜೊತೆಗೆ ಸಚಿವ ಚೆಲುವರಾಯ ಸ್ವಾಮಿ, ಭೈರತಿ ಸುರೇಶ್ ಕೂಡಾ ಸಾಥ್ ನೀಡಿದ್ದಾರೆ. ವಿತ್ತ ಸಚಿವೆಗೆ ರಾಜ್ಯಕ್ಕೆ ಕಳೆದ ಐದು ವರ್ಷಗಳಿಂದ ರಾಜ್ಯಕ್ಕೆ ನಬಾರ್ಡ್ ನೀಡಿರುವ ಸಾಲದ ಮೊತ್ತದ ದಾಖಲಾತಿಗಳನ್ನು ನೀಡಿದ್ದಾರೆ. ಈ ವರ್ಷ ಶೇ.58 ರಷ್ಟು ಕಡಿತ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಈ ಸಾಲದ ಮೊತ್ತ ಕಡಿತದಿಂದಾಗಿ ರಾಜ್ಯದ ರೈತರಿಗೆ ಬಹುದೊಡ್ಡ ಸಂಕಷ್ಟ ಎದುರಾಗಿದೆ. ಹಾಗಾಗಿ ಸಾಲದ ಮಿತಿಯನ್ನು ಹೆಚ್ಚಿಸಿ ರೈತರ ಹಿತಕಾಯುವಂತೆ ಮನವಿ ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಮನವಿಗೆ ವಿತ್ತ ಸಚಿವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.