ಅಂಡಮಾನ್ ನಿಕೋಬಾರ್ ದ್ವೀಪ ಸಮೂಹದಲ್ಲಿ ಭಾರಿ ಮಳೆಗೆ ಕಾರಣವಾಗಿದ್ದ ವಾರ್ಧಾ ಚಂಡಮಾರುತವೀಗ ಪೂರ್ವ ಕರಾವಳಿಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂಜಾನೆ 9.30ರ ಸುಮಾರಿಗೆ ವಾರ್ಧಾ 120 ಕೀಲೋಮೀಟರ್ ವೇಗದಲ್ಲಿ ಅಬ್ಬರಿಸುತ್ತ ಚೆನ್ನೈ ತಲುಪಿದ್ದು ನಗರದಾದ್ಯಂತ ಗಾಳಿ ಮಳೆಯಾಗುತ್ತಿದೆ.
ಚಂಡಮಾರುತದ ಪರಿಣಾಮವಾಗಿ ನಿನ್ನೆ ರಾತ್ರಿಯಿಂದಲೇ ಚೆನ್ನೈ ಮತ್ತು ಆಂಧ್ರದ ರಾಯಲ್ ಸೀಮಾ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಖಾಸಗಿ ಕಂಪನಿಗಳಿಗೂ ಸಹ ರಜೆ ಘೋಷಿಸಲಾಗಿದ್ದು, ಕೆಲವು ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚನೆ ನೀಡಿವೆ.
ತಮಿಳುನಾಡಿನ ಉತ್ತರ ಭಾಗ ಮತ್ತು ದಕ್ಷಿಣ ಆಂಧ್ರದಲ್ಲಿ ವಾರ್ಧಾ ಅಪ್ಪಳಿಸುತ್ತಿದ್ದು ಮಧ್ಯಾಹ್ನದ ನಂತರ ನೆಲ್ಲೂರು ಮತ್ತು ಮಚಲೀಪಟ್ಟಣಂ ಹಾದು ಹೋಗಲಿದೆ.
ಬಂಗಾಳಕೊಲ್ಲಿಯಲ್ಲಿ ವಾಯು ಭಾರ ಕುಸಿತದಿಂದಾಗಿ ಉಂಟಾಗಿರುವ ವಾರ್ಧಾ ಸೃಷ್ಟಿಯಾಗಿದ್ದು ಮುಂಜಾಗ್ರತಾ ಕ್ರಮವಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಈಗಾಗಲೇ ಎರಡು ರಾಜ್ಯಗಳ ಕರಾವಳಿಯಲ್ಲಿ ಭಾರಿ ಪ್ರಮಾಣದ ಅಲೆಗಳು ಏಳುತ್ತಿದ್ದು ಕರಾವಳಿ ಭಾಗದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು, ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರನ್ನು ಸನ್ನದ್ಧರಾಗಿಸಲಾಗಿದೆ.
ಕಡಲೂರು, ಕಾಂಚೀಪುರಂ, ತಿರುವಣ್ಣಾಮಲೈ, ವೇಲೂರು, ವಿಳುಪುರಂ, ಕೃಷ್ಣಗಿರಿಯಲ್ಲೂ ಭಾರಿ ಮಳೆಯಾಗುತ್ತಿದ್ದು ಇಂದು ಚೆನ್ನೈನಲ್ಲಿ 20 ಸೆಂಟಿಮೀಟರ್ ಮಳೆಯಾಗಬಹುದೆಂದು ಹವಾಮಾನ ತಜ್ಞರು ಹೇಳಿದ್ದಾರೆ.
ವಾರ್ಧಾದ ಪರಿಣಾಮ ಬೆಂಗಳೂರಿನಲ್ಲಿ ಆಗಲಿದ್ದು ನಗರದಾದ್ಯಂತ ಭಾರಿ ಮಳೆಯಾಗಬಹುದೆಂದು ಎಚ್ಚರಿಕೆ ನೀಡಲಾಗಿದೆ.
ವಾರ್ಧಾ ಎನ್ನುವುದು ಅರೇಬಿಕ್ ಮತ್ತು ಉರ್ದು ಶಬ್ಧವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.