Select Your Language

Notifications

webdunia
webdunia
webdunia
webdunia

ಕೇಂದ್ರ ತನ್ನ ಪರಮಾಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ: ಮುದ್ದಹನುಮೇಗೌಡ

ಕೇಂದ್ರ ತನ್ನ ಪರಮಾಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ: ಮುದ್ದಹನುಮೇಗೌಡ
ನವದೆಹಲಿ , ಮಂಗಳವಾರ, 3 ಮಾರ್ಚ್ 2015 (13:17 IST)
ಭೂಮಿ ಮತ್ತು ಖನಿಜ ಸಂಪತ್ತು ಅಭಿವೃದ್ಧಿ ತಿದ್ದುಪಡಿ ಕಾಯಿದೆಗೆ ಸುಗ್ರೀವಾಜ್ಞೆ ಅಗತ್ಯವಿರಲಿಲ್ಲ. ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸುವ ತನ್ನ ಪರಮಾಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ರಾಜ್ಯದ ತುಮಕೂರು ಜಿಲ್ಲೆಯ ಕಾಂಗ್ರೆಸ್ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಸದನದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
 
ಸದನದ ಕಲಾಪ ವೇಳೆಯಲ್ಲಿ ಪ್ರತಿಕ್ರಿಯಿಸಿದ ಸಂಸದರು, ಖನಿಜ ಎಂಬುದು ಅತ್ಯಮೂಲ್ಯವಾದ ವಸ್ತು. ಎಲ್ಲರಿಗೂ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಅದನ್ನು ಪಾರದರ್ಶಕವಾಗಿ ಹಂಚಿಕೆ ಮಾಡಬೇಕು. ಆದರೆ ಅತಿ ಸರಳೀಕರಣಗೊಳಿಸುವುದು ಸರಿಯಲ್ಲ. ಏಕೆಂದರೆ ಖನಿಜವನ್ನು ಇತರೆ ವಸ್ತುಗಳಂತೆ ಉತ್ಪಾದಿಸಲು ಅಸಾಧ್ಯ. ಈ ಹಿನ್ನೆಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಖನಿಜವನ್ನು ಬಳಸಿಕೊಳ್ಳಬೇಕು. ಅಲ್ಲದೆ ಭೂಮಿಯಿಂದ ಅಗತ್ಯಕ್ಕಿಂತಲೂ ಹೆಚ್ಚಾಗಿ ಖನಿಜವನ್ನು ತೆಗೆಯಬಾರದು. ಆದರೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾಯಿದೆಗೆ ತಿದ್ದುಪಡಿ ತರುತ್ತಿದ್ದು, ಸರಳಗೊಳಿಸಲು ಮುಂದಾಗಿದೆ. ಈ ಪರಿಣಾಮ ಮುಂದಿನ ಪೀಳಿಗೆ ಖನಿಜದ ಕೊರತೆಯನ್ನು ಎದುರಿಸಬುಹುದು. ಹಾಗಾಗಿ ಖನಿಜವನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕಿರುವುದು ಅನಿವಾರ್ಯ ಎಂದರು.  
 
ಇದೇ ವೇಳೆ, ತುರ್ತು ಪರಿಸ್ಥಿತಿಯಂತಹ ಸಂದರ್ಭಗಳು ಎದುರಾದಾಗ ಮಾತ್ರ ಸುಗ್ರೀವಾಜ್ಞೆ ಹೊರಡಿಸಬೇಕು. ಆದರೆ ಸರ್ಕಾರ ಅನಗತ್ಯವಾಗಿ ಸುಗ್ರೀವಾಜ್ಞೆ ಹೊರಡಿಸಿ ಕಾಯಿದೆಯ ತಿದ್ದುಪಡಿಗೆ ಮುಂದಾಗಿದೆ. ಇದು ಸೂಕ್ತವಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
 
ಕೇಂದ್ರ ಸರ್ಕಾರವು ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕಳೆದ ಜ.12ರಂದು ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಸೇರಿದಂತೆ ರಾಷ್ಟ್ರದ ಪ್ರಮುಖ ರಾಜಕೀಯ ನಾಯಕರು ಇದನ್ನು ವಿರೋಧಿಸಿದ್ದರು. ಇದಕ್ಕೆ ಕಾರಣ ಸರ್ಕಾರವು ಸುಗ್ರೀವಾಜ್ಞೆ ಹೊಡಿಸಿದ್ದು, ನಗರಾಭಿವೃದ್ಧಿ ಹೆಸರಿನಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕಸಿಯಲು ಯತ್ನಿಸುತ್ತಿದೆ ಎಂಬುದೇ ಆಗಿದೆ.

Share this Story:

Follow Webdunia kannada