Select Your Language

Notifications

webdunia
webdunia
webdunia
webdunia

ಬಿಜೆಪಿ ಗೆಲುವಿಗೆ ಬಾಬಾ ರಾಮದೇವ್ ಕೂಡ ಕಾರಣ: ಅಮಿತ್ ಶಾ

ಬಿಜೆಪಿ ಗೆಲುವಿಗೆ ಬಾಬಾ ರಾಮದೇವ್ ಕೂಡ ಕಾರಣ: ಅಮಿತ್ ಶಾ
ಹರಿದ್ವಾರ , ಸೋಮವಾರ, 15 ಸೆಪ್ಟಂಬರ್ 2014 (12:16 IST)
ಕೇಂದ್ರದಲ್ಲಿ ಎನ್‌ಡಿಎ ಸರಕಾರ ರಚನೆಯಾಗಲು ಕೇವಲ ಮೋದಿಯವರಷ್ಟೇ ಕಾರಣರಲ್ಲ, ಬಾಬಾ ರಾಮ್‌ದೇವ್ ಕೂಡ ನಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕೇಸರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಭಿಪ್ರಾಯ ಪಟ್ಟಿದ್ದಾರೆ. 

ಕಳೆದ ಮೇ ತಿಂಗಳಲ್ಲಿ ಕೊನೆಗೊಂಡ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಪರವಾಗಿ ರಾಷ್ಟ್ರವ್ಯಾಪಿ ಅಭಿಯಾನ ನಡೆಸಿದ್ದಕ್ಕೆ ಯೋಗಗುರು ಬಾಬಾ ರಾಮ್‌ದೇವ್ ಅವರನ್ನು ಶ್ಲಾಘಿಸಿರುವ ಬಿಜೆಪಿ ಅಧ್ಯಕ್ಷ  ತಮ್ಮ ಪಕ್ಷದ ಭರ್ಜರಿ ಗೆಲುವಿನಲ್ಲಿ ಬಾಬಾ ನಡೆಸಿದ ಅಭಿಯಾನ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದು, ಯೋಗಗುರುವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
 
ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಸ್ಥಾಪನೆಯಾಗಿರುವ ಸೇವಾ ಸದನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾ, ಯೋಗ ಮತ್ತು ಆರ್ಯುವೇದವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಲು, ಭಾರತದಲ್ಲಿ ಅಳಿವಿನ ಅಂಚಿನಲ್ಲಿರುವ ಸಂಸ್ಕೃತ ಇತ್ಯಾದಿ ಭಾಷೆಗಳ ಉಳಿವಿಗಾಗಿ ಬಾಬಾ ಮಾಡುತ್ತಿರುವ ಹೋರಾಟದಲ್ಲಿ ಕೇಂದ್ರ ಸರಕಾರ ಸಹಕಾರ ನೀಡಲಿದೆ ಎಂದು ವಾಗ್ದಾನ ಮಾಡಿದರು.
 
ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ರಾಮ್‌ದೇವ್ ಹಾಜರಿಯನ್ನು ಸ್ಮರಿಸಿಕೊಂಡ ಶಾ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಧಕ್ಕೆ ಬಂದಾಗಲೆಲ್ಲ ಬಾಬಾ ಹೋರಾಡಿದ್ದಾರೆ ಎಂದರು.
 
ಮೋದಿ ಸರಕಾರದ 100 ದಿನಗಳ ಕಾರ್ಯವೈಖರಿಯನ್ನು  ಸಮರ್ಥಿಸಿಕೊಂಡ ಅವರು ಗಂಗಾ ಶುದ್ಧೀಕರಣ ಮತ್ತು ಹೆಣ್ಣು ಶಿಶುವಿನ ರಕ್ಷಣೆ,  ಸ್ವಚ್ಛತೆಗೆ ಒತ್ತು, ಸೇರಿದಂತೆ ಅಧಿಕಾರಕ್ಕೇರಿದ 100 ದಿನಗಳಲ್ಲಿ ಮೋದಿ ಸರಕಾರವು ಹಲವಾರು ದೃಢ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.
 
ಈ ಸಂದರ್ಭದಲ್ಲಿ  ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಶಾ, ಯುಪಿಎ ಆಡಳಿತ ಅಧಿಕಾರಕ್ಕೇರಿದ ದ ಕೂಡಲೇ ಭಯೋತ್ಪಾದನಾ ನಿಗ್ರಹ ಕಾನೂನನ್ನು ಹಿಂತೆಗೆದುಕೊಂಡಿತ್ತು, ಆದರೆ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ಕೂಡಲೇ ಕಪ್ಪು ಹಣವನ್ನು ಮರಳಿ ತರಲು ವಿಶೇಷ ಕ್ರಮವನ್ನು ತೆಗೆದುಕೊಂಡಿದೆ ಎಂದರು. 
 
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಅಮಿತ್‌ ಶಾ ಉತ್ತರಾಖಂಡಕ್ಕೆ ಭೇಟಿ ನೀಡಿದ್ದಾರೆ.

Share this Story:

Follow Webdunia kannada