ಅವಿವಾಹಿತರಾಗಿರುವುದು ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿರದ ಹಿನ್ನೆಲೆಯಲ್ಲಿ ಅಮೆರಿಕ ವೀಸಾ ನೀಡಲು ನಿರಾಕರಿಸಿತ್ತು ಎಂದು 4500 ಕೋಟಿ ರೂ.ಗಳ ವಹಿವಾಟು ನಡೆಸುತ್ತಿರುವ ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.
ನಂತರ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲು ಆಹ್ವಾನ ನೀಡಿದ ಅಮೆರಿಕ 10 ವರ್ಷಗಳ ವೀಸಾ ನೀಡಿತು ಎಂದು ತಮ್ಮ ಹಳೆಯ ನೆನಪುಗಳನ್ನು ಸ್ಮರಿಸಿದ್ದಾರೆ.
ಗ್ಲೋಬಲ್ ಇನ್‌ವೆಸ್ಟರ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಅಮೆರಿಕ ವೀಸಾಗೆ ಅರ್ಜಿಹಾಕಿದಾಗ ಅದನ್ನು ಅಧಿಕಾರಿಗಳು ತಿರಸ್ಕರಿಸಿದರು. ನಾನು ಏನು ಕಾರಣ ಎಂದು ಕೇಳಿದಾಗ, ಬಾಬಾಜಿ ನೀವು ಅವಿವಾಹಿತರು ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿರದಿದ್ದರಿಂದ ವೀಸಾ ನೀಡಲಾಗದು ಎಂದು ಸ್ಪಷ್ಟಪಡಿಸಿದ್ದರು. ನಾನು ಇವತ್ತಿಗೂ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಎಂದರು.
ನನ್ನ ಅಮೆರಿಕ ವೀಸಾ ಅರ್ಜಿಯನ್ನು ತಿರಸ್ಕರಿಸಿದರ ಹಿಂದೆ ಕೆಲವು ಕಾರಣಗಳಿದ್ದವು ಎನ್ನುವುದು ನನಗೆ ನಂತರ ಗೊತ್ತಾಯಿತು ಎಂದರು. ಆದರೆ, ಯಾವ ವರ್ಷದಲ್ಲಿ ಅಮೆರಿಕ ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು ಎನ್ನುವುದು ಬಹಿರಂಗಪಡಿಸಲು ನಿರಾಕರಿಸಿದರು.
ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ಆಹ್ವಾನ ಬಂದಾಗ ಅಮೆರಿಕ 10 ವರ್ಷಗಳ ವೀಸಾ ನೀಡಿರುವುದು ಬೇರೆ ವಿಷಯ ಎಂದರು.
ಸಭೆಯಲ್ಲಿ ಅನಿಲ್ ಅಂಬಾನಿ, ಗೋಪಿಚಂದ್ ಹಿಂದೂಜಾ, ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಮತ್ತು ಇತರ ಧಾರ್ಮಿಕ ಗುರುಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ