ಕೋಲ್ಕತ್ತಾ : 40 ವರ್ಷದ ಮಹಿಳೆಯೊಬ್ಬಳ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದು,
ಆರೋಪಿಗಳು ಮಹಿಳೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಸಜೀವ ದಹನ ಮಾಡಲು ಯತ್ನಿಸಿದ ಘಟನೆ ಪಶ್ಚಿಮ ಬಂಗಾಳದ ನಮ್ಖಾನಾ ಗ್ರಾಮದಲ್ಲಿ ನಡೆದಿದೆ.
ದೂರಿನ ಪ್ರಕಾರ, ಮಹಿಳೆಯು ಬೆಳಗ್ಗೆ 4 ಗಂಟೆ ಸುಮಾರಿಗೆ ವಾಶ್ರೂಮ್ ಬಳಸಲು ಹೊರಗೆ ಹೋದಾಗ ಅಪಹರಿಸಿದ್ದಾರೆ. ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಗಳು ಆಕೆಯನ್ನು ಅಪಹರಿಸಿ ಎರಡನೇ ಮಹಡಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ನಂತರ ಆರೋಪಿಗಳು ಆಕೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಸಜೀವ ದಹನ ಮಾಡಲು ಯತ್ನಿಸಿದ್ದಾರೆ. ಸಂತ್ರಸ್ತೆಯ ಕಿರುಚಾಟವು ಆಕೆಯ ಅಕ್ಕ ಪಕ್ಕದ ಮನೆಗೆ ಕೇಳಿಸಿದೆ.
ಕೂಡಲೇ ಅವರು ಅವಳ ಸಹಾಯಕ್ಕೆ ಬಂದಿದ್ದಾರೆ. ನೆರೆಹೊರೆಯವರು ಬರುತ್ತಿರುವುದನ್ನು ಕಂಡ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಿಂದ ಭಯಭೀತಳಾಗಿದ್ದ ಮಹಿಳೆ ತಕ್ಷಣ ಪೊಲೀಸರಿಗೆ ದೂರು ನೀಡಲಿಲ್ಲ.
ಆದರೆ, ಶನಿವಾರದಿಂದ ಆಕೆಯ ಆರೋಗ್ಯ ಹದಗೆಡಲಾರಂಭಿಸಿತು. ಹೀಗಾಗಿ ಆರಂಭದಲ್ಲಿ ಆಕೆಯನ್ನು ನಮ್ಖಾನಾ ಬ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಭಾನುವಾರ ಆಕೆಯನ್ನು ಕಾಕದ್ವೀಪ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.