ನವದೆಹಲಿ: ಮೂರು ಬಾರಿ ನೋಟಿಸ್ ಬಂದರೂ ಇಡಿ ಸಮನ್ಸ್ ಗೆ ಕ್ಯಾರೇ ಮಾಡದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಇಂದು ಬಂಧಿಸುವ ಸಾಧ‍್ಯತೆಯಿದೆ.
ದೆಹಲಿ ಅಬಕಾರೀ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮೂರನೇ ಬಾರಿಗೆ ಅರವಿಂದ್ ಕೇಜ್ರಿವಾಲ್ ಗೆ ನೋಟಿಸ್ ನೀಡಲಾಗಿತ್ತು. ಆದರೆ ಜಾರಿ ನಿರ್ದೇಶನಾಲಯದ ನೋಟಿಸ್ ದುರುದ್ದೇಶದಿಂದ ಕೂಡಿದೆ. ಇದೆಲ್ಲಾ ಕೇಂದ್ರ ಮಾಡುತ್ತಿರುವ ತಂತ್ರ ಎಂದು ಆರೋಪಿಸಿ ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿಲ್ಲ.
ಹೀಗಾಗಿ ಇಂದು ಇಡಿ ಕೇಜ್ರಿವಾಲ್ ನಿವಾಸಕ್ಕೆ ದಾಳಿ ನಡೆಸಿ ಅವರನ್ನು ಬಂಧಿಸುವ ಸಾಧ‍್ಯತೆಯಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕರು ಸೋಷಿಯಲ್ ಮೀಡಿಯಾ ಖಾತೆ ಎಕ್ಸ್ ನಲ್ಲಿ ಹೇಳಿಕೊಂಡಿದ್ದಾರೆ.
ಒಂದು ವೇಳೆ ಕೇಜ್ರಿವಾಲ್ ರನ್ನು ಬಂಧಿಸಿದರೆ ಆಮ್ ಆದ್ಮಿ ಪಕ್ಷ ಇದೇ ವಿಚಾರವನ್ನು ಕೇಂದ್ರದ ಮೇಲೆ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ‍್ಯತೆಯಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಜ್ರಿವಾಲ್ ನಿಕಟವರ್ತಿಗಳಾದ ಸಂಜಯ್ ಸಿಂಗ್ ಮತ್ತು ಮನೀಶ್ ಸಿಸೋಡಿಯಾ ಜೈಲಿನಲ್ಲಿದ್ದಾರೆ.