ಹೈದರಾಬಾದ್: ಆನ್ ಲೈನ್ ನಲ್ಲಿ ಏನನ್ನೋ ಆರ್ಡರ್ ಮಾಡಿದರೆ ಇನ್ನೇನೋ ಸಿಗುವುದು ಹೊಸತೇನಲ್ಲ. ಆದರೆ ಆಂಧ್ರಪ್ರದೇಶದಲ್ಲಿ ಮಹಿಳೆಯೊಬ್ಬಳು ಆನ್ ಲೈನ್ ನಲ್ಲಿ ಮನೆ ಸಾಮಾನುಗಳನ್ನು ಆರ್ಡರ್ ಮಾಡಿದರೆ ಸಿಕ್ಕಿದ್ದು ನೋಡಿ ಮೂರ್ಛೆ ಹೋಗೋದೊಂದೇ ಬಾಕಿ.
ನಾಗ ತುಳಸಿ ಎಂಬ ಮಹಿಳೆ ಸರ್ಕಾರದಿಂದ ಮಂಜೂರಾದ ನಿವೇಶನದಲ್ಲಿ ಮನೆ ಕಟ್ಟಿಸುತ್ತಿದ್ದಳು. ಮನೆ ಕಟ್ಟಿಸಲು ಆಕೆಗೆ ಕ್ಷತ್ರಿಯ ಸೇವಾ ಸಮಿತಿ ಹಣಕಾಸಿನ ಸಹಾಯ ಮಾಡುತ್ತಿದೆ. ಇತ್ತೀಚೆಗೆ ಆಕೆ ಮನೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಕ್ಷತ್ರಿಯ ಸಮಾಜದ ಸಹಾಯ ಕೇಳಿದ್ದಳು.
ಅದರಂತೆ ಆಕೆಗೆ ಆನ್ ಲೈನ್ ನಲ್ಲಿ ಸ್ವಿಚ್, ಫ್ಯಾನ್ ಸೇರಿದಂತೆ ಮನೆ ಸಾಮಗ್ರಿಗಳು ಸದ್ಯದಲ್ಲೇ ಬರಲಿದೆ ಎಂದು ವ್ಯಾಟ್ಸಪ್ ಸಂದೇಶ ಬಂದಿತ್ತು. ಅದರಂತೆ ಗುರುವಾರ ರಾತ್ರಿ ಮಹಿಳೆಗೆ ಪಾರ್ಸೆಲ್ ಬಂತು. ಆದರೆ ಪಾರ್ಸಲ್ ನಲ್ಲಿ ಕೊಳೆತ ಮೃತದೇಹವೊಂದಿತ್ತು. ಜೊತೆಗೆ 1.3 ಕೋಟಿ ರೂ. ನೀಡಲು ಸಂದೇಶ ಪತ್ರವೂ ಇತ್ತು. ತಪ್ಪಿದರೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂಬ ಬೆದರಿಕೆಯೂ ಇತ್ತು.
ತಕ್ಷಣವೇ ಆಕೆ ಪೊಲೀಸರಿಗೆ ಮಾಹಿತಿ ನಿಡಿದ್ದಾರೆ. ತಕ್ಷಣವೇ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಈ ವೇಳೆ ನಾಲ್ಕೈದು ದಿನಗಳ ಹಿಂದೆಯೇ ಸಾವಾಗಿರಬಹುದು ಎಂದು ವರದಿ ಬಂದಿದೆ. ಇದೀಗ ಈ ಮೃತದೇಹ ಯಾರದ್ದು, ಪಾರ್ಸಲ್ ನಲ್ಲಿ ಹೇಗೆ ಬಂತು ಎಂಬ ವಿವರಗಳನ್ನು ಕಲೆಹಾಕಲು ಪೊಲೀಸರು ತನಿಖೆ ಶುರು ಮಾಡಿದ್ದಾರೆ.