ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ವಿಚಾರಿಸಲು ಗಣ್ಯಾತಿಗಣ್ಯರು ಆಸ್ಪತ್ರೆಗೆ ಆಗಮಿಸುತ್ತಿದ್ದು, ಇಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹ ಚೆನ್ನೈಗೆ ಆಗಮಿಸಿ ಅಮ್ಮನ ದರ್ಶನ ಪಡೆದಿದ್ದಾರೆ.
ನಾಯಕದ್ವಯರು ಇಂದು ಮಧ್ಯಾಹ್ನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಭೇಟಿ ಮಾಡಿ ವಿಚಾರಿಸಿದರು ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳ 22 ರಂದು ನೀರ್ಜಲೀಕರಣ ಮತ್ತು ಜ್ವರದ ಬಾಧೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಜಯಾ(68) ಅವರ ಆರೋಗ್ಯದ ಬಗ್ಗೆ ಯಾವುದೇ ನಿಖರ ಮಾಹಿತಿಗಳು ಹೊರಬರುತ್ತಿಲ್ಲ.
ಜಯಾ ಆರೋಗ್ಯ ವಿಚಾರಿಸಲು ರಾಜಕೀಯ ನಾಯಕರ ದಂಡೇ ಆಸ್ಪತ್ರೆಗೆ ಹರಿದು ಬರುತ್ತಿದೆ. ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಪಾಲರಾದ ಕ್ರಮವಾಗಿ ವಿದ್ಯಾಸಾಗರ್ ರಾವ್, ಪಿ.ಸದಾಶಿವಮ್, ಕಿರಣ್ ಬೇಡಿ, ಕೇಂದ್ರ ಸಚಿವ ಎಮ್. ವೆಂಕಯ್ಯ ನಾಯ್ಡು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇರಳ ಮತ್ತು ಪುದುಚೇರಿ ಸಿಎಂಗಳಾದ ವಿಜಯನ್ ಮತ್ತು, ವಿ. ನಾರಾಯಣಸ್ವಾಮಿ ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿ ಜಯಾ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಇನ್ನೊಂದೆಡೆ, ತಮ್ಮ ನಾಯಕಿ ಆರೋಗ್ಯ ಸುಧಾರಿಸಲೆಂದು ಎಐಡಿಎಂಕೆ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಪೂಜೆ, ಯಜ್ಞ, ಹೋಮಹವನಗಳನ್ನು ಮುಂದುವರೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ