ನವದೆಹಲಿ: ದೇಶದಲ್ಲಿ 75 ವರ್ಷಗಳಿಂದ ಯಾವುದೇ ಪಕ್ಷವು ಈ ಪ್ರಮಾಣದಲ್ಲಿ ಕಿರುಕುಳ ನೀಡಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಸಂಬಂಧ ಜೈಲು ಸೇರಿ, ಮಧ್ಯಂತರ ಜಾಮೀನು ಮೂಲಕ ಹೊರಬಂದಿರುವ ಅರವಿಂದ್ ಕೇಜ್ರಿವಾಲ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿದ ಅವರು, ಆದರೆ ಎಲ್ಲ ಕಳ್ಳರೂ ಅವರ ಪಕ್ಷದಲ್ಲಿದ್ದಾರೆ ಎಂದು ಟೀಕಿಸಿದರು.
2024 ರ ಲೋಕಸಭಾ ಚುನಾವಣೆಯಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ, ಎಂಕೆ ಸ್ಟಾಲಿನ್ ಸೇರಿದಂತೆ ಎಲ್ಲಾ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸುತ್ತಾರೆ ಎಂದರು.
75 ವರ್ಷಗಳಲ್ಲಿ ಬೇರೆ ಯಾವ ಪಕ್ಷವೂ ಈ ಮಟ್ಟಿಗೆ ಕಿರುಕುಳ ನೀಡಿಲ್ಲ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಪ್ರಧಾನಿ ಹೇಳುತ್ತಿದ್ದಾರೆ ಆದರೆ ಎಲ್ಲಾ ಕಳ್ಳರು ತಮ್ಮ ಪಕ್ಷದಲ್ಲಿದ್ದಾರೆ" ಎಂದು ಅವರು ಕಿಡಿಕಾರಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚಿಸುವುದಿಲ್ಲ ಎಂದು ಪುನರುಚ್ಚರಿಸಿದ ಕೇಜ್ರಿವಾಲ್, "ಜೈಲಿನಿಂದ ಬಿಡುಗಡೆಯಾದ ನಂತರ ಕಳೆದ 20 ಗಂಟೆಗಳಲ್ಲಿ ನಾನು ಚುನಾವಣಾ ತಜ್ಞರು ಮತ್ತು ಜನರೊಂದಿಗೆ ಮಾತನಾಡಿದ್ದೇನೆ ಮತ್ತು ಬಿಜೆಪಿ ಸರ್ಕಾರ ರಚಿಸುವುದಿಲ್ಲ ಎಂದು ತಿಳಿದುಕೊಂಡಿರುವುದಾಗಿ" ಕೇಜ್ರಿವಾಲ್ ಹೇಳಿದರು.
"ಎಎಪಿ ಕೇಂದ್ರದಲ್ಲಿ ಸರ್ಕಾರದ ಭಾಗವಾಗಲಿದೆ. ನಾವು ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನವನ್ನು ಪಡೆಯುತ್ತೇವೆ" ಎಂದು ಕೇಜ್ರಿವಾಲ್ ತಿಳಿಸಿದರು.<>