ಸೀಮಿತ ದಾಳಿ ಬಳಿಕ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ, ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಪಾಕಿಸ್ತಾನದ ನಾಲ್ಕು ಕ್ಯಾಂಪ್‌ಗಳನ್ನು ನಾಶ ಮಾಡಿದೆ.
ಜಮ್ಮುವಿನ ಕುಪ್ವಾರ ಜಿಲ್ಲೆಯ ಕೇರನ್ ಸೆಕ್ಟರ್‌ನಲ್ಲಿ ಪಾಕಿಸ್ನಾದ ನಾಲ್ಕು ಕ್ಯಾಂಪ್‌ಗಳನ್ನು ನಾಶ ಮಾಡಿದ್ದೇವೆ ಎಂದು ಸೇನಾ ಮೂಲಗಳು ಸ್ಪಷ್ಟಪಡಿಸಿವೆ.
ಕುಪ್ವಾರಾದ ಮಚ್ಚಲ್ ಸೆಕ್ಟರ್‌ನಲ್ಲಿ ಉಗ್ರರು ಶುಕ್ರವಾರ ಭಾರತೀಯ ಸೈನಿಕನನ್ನು ಕೊಂದು ಆತನ ದೇಹವನ್ನು ತುಂಡುತುಂಡಾಗಿಸಿದ್ದರು. ಬಳಿಕ ಪಾಕ್ ಸೈನಿಕರ ನೆರವಿನಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪಲಾಯನಗೈದಿದ್ದರು. ಈ ದುಷ್ಕೃತ್ಯಕ್ಕ ತಕ್ಕ ಉತ್ತರವನ್ನು ನೀಡುತ್ತೇವೆ ಎಂದು ಭಾರತೀಯ ಸೇನೆ ಪ್ರತಿಜ್ಞೆಗೈದಿತ್ತು. ಅಂತೆಯೇ ಪಾಕ್ ಶಿಬಿರಗಳ ಮೇಲೆ ದಾಳಿ ನಡೆಸಿ ಸೇಡು ತೀರಿಸಿಕೊಂಡಿದೆ.
ಕಳೆದ 8 ದಿನಗಳಲ್ಲಿ ಪಾಕ್ ಸೈನಿಕರು ಪದೇ ಪದೇ ಅಪ್ರಜೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೈನಿಕರು ಸಹ ತಕ್ಕ ಉತ್ತರ ನೀಡುತ್ತಿದ್ದಾರೆ. ದಾಳಿಯಲ್ಲಿ ನಾಲ್ವರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಅನೇಕ ಭಾರತೀಯ ನಾಗರಿಕರು ಗಾಯಗೊಂಡಿದ್ದಾರೆ.
ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ.