ಅಮರಾವತಿ : ಚಂದ್ರಯಾನ ಯಶಸ್ಸಿನ ಬಳಿಕ ಇಸ್ರೋ ಈಗ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಆದಿತ್ಯ ಎಲ್-1 ಪ್ರಯೋಗಕ್ಕೆ ವೇದಿಕೆ ಸಜ್ಜಾಗಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಲ್ಲಿ ಇಂದು ಬೆಳಗ್ಗೆ 11.50ಕ್ಕೆ ಸರಿಯಾಗಿ ಆದಿತ್ಯ ಎಲ್1 ಹೊತ್ತ ಪಿಎಸ್ಎಲ್ವಿ-ಸಿ57 ರಾಕೆಟ್ ನಭಕ್ಕೆ ಚಿಮ್ಮಲಿದೆ. ಈ ಪ್ರಯೋಗದ ಹಿನ್ನೆಲೆಯಲ್ಲಿ ಶುಕ್ರವಾರ ಆದಿತ್ಯ ಎಲ್1 ಆಕೃತಿ ಹೊತ್ತ ಇಸ್ರೋ ವಿಜ್ಞಾನಿಗಳ ತಂಡ ತಿರುಮಲ ತಿಮ್ಮಪ್ಪನನ್ನು ದರ್ಶಿಸಿದೆ. ಸೂಳ್ಳೂರುಪೇಟೆಯ ಚೆಂಗಲಮ್ಮ ಪರಮೇಶ್ವರಿ ಸನ್ನಿಧಿಯಲ್ಲೂ ವಿಶೇಷ ಪೂಜೆ ನಡೆಸಿದೆ.
ಚಂದ್ರಯಾನ್, ಮಂಗಳಯಾನ್ ನಂತ್ರ ಇಸ್ರೋ ಕೈಗೊಳ್ಳುತ್ತಿರುವ ಅತ್ಯಂತ ಪ್ರಮುಖ ಯೋಜನೆ ಇದಾಗಿದೆ. ಇದೇ ಮೊದಲ ಬಾರಿ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಇದಕ್ಕೆ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಆಸ್ಟ್ರೇಲಿಯಾ ಸೇರಿ ವಿವಿಧ ದೇಶಗಳ ಅಂತರಿಕ್ಷ ಸಂಸ್ಥೆಗಳ ನೆರವನ್ನು ಇಸ್ರೋ ಪಡೆಯುತ್ತಿದೆ.