2014 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜಯ ಖಂಡಿತ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಭಾನುವಾರ ಹೇಳಿದ್ದಾರೆ.
272 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಲಿರುವ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸುಷ್ಮಾ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಹಾಗಾಗಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ನ್ನು ಸೋಲಿಸುವುದರ ಮುಖಾಂತರ ಜನರು ಬಿಜೆಪಿ ಮೇಲೆ ಭರವಸೆ ಇಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಕೇವಲ ಸೋಲು ಕಂಡಿಲ್ಲ, ಪೂರ್ಣವಾಗಿ ನಾಶಗೊಂಡಿದೆ ಎಂದ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇನ್ನು ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿಲ್ಲ ಎಂದು ಟೀಕಿಸಿದ್ದಾರೆ.
ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸದೇ ಇರುವುದು ನಮ್ಮ ಪರಂಪರೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿಗೆ ಪರಂಪರೆ ಬಗ್ಗೆ ಗೊತ್ತಿದೇಯೋ ಇಲ್ಲವೋ ಎಂದು ಸುಷ್ಮಾ ವ್ಯಂಗ್ಯವಾಡಿದ್ದಾರೆ.
ಬಿಜೆಪಿಯವರು ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸುತ್ತಾರೆ. ಹಾಗಾದರೇ ರಾಹುಲ್ ಒಮ್ಮೆಯಾದರು ಸಂಸತ್ ಅಧಿವೇಶನದಲ್ಲಿ ಹಾಜರಾಗಿದ್ದಾರೆಯೇ? ಅಧಿವೇಶನದಲ್ಲಿ ಹಾಜರಾಗದ ರಾಹುಲ್ಗೆ ಅಲ್ಲಿ ನಡೆಯುವ ಸಂಗತಿಗಳ ಬಗ್ಗೆ ತಿಳಿದಿರುವುದಿಲ್ಲ. ಹಾಗಾಗಿ, ಬಿಜೆಪಿ ವಿರುದ್ಧ ಸುಳ್ಳು ವದಂತಿಗಳನ್ನು ಹಬ್ಬಿಸುವುದು ಬಿಡಬೇಕು ಎಂದು ಸುಷ್ಮಾ ಹೇಳಿದ್ದಾರೆ.