Select Your Language

Notifications

webdunia
webdunia
webdunia
webdunia

ಹಿಂಸಾಚಾರಕ್ಕೆ ಅಲ್ಪಸಂಖ್ಯಾತರೇ ಗುರಿ: ಪ್ರಧಾನಿಗೆ ತೀವ್ರ ನೋವು

ಹಿಂಸಾಚಾರಕ್ಕೆ ಅಲ್ಪಸಂಖ್ಯಾತರೇ ಗುರಿ: ಪ್ರಧಾನಿಗೆ ತೀವ್ರ ನೋವು
ನವದೆಹಲಿ , ಭಾನುವಾರ, 11 ಸೆಪ್ಟಂಬರ್ 2011 (09:08 IST)
ದೇಶದಲ್ಲಿ ನಡೆದ ಅಹಿತಕರ ಘಟನೆಗಳಿಂದಾಗಿ ತಮ್ಮನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಅಲ್ಪಸಂಖ್ಯಾತ ಸಮುದಾಯವು ಭಾವಿಸತೊಡಗಿದೆ ಎಂದು ಪ್ರಧಾನಿ ಮನಮೋಹನ ಸಿಂಗ್‌ ಅವರು ತೀವ್ರವಾಗಿ ಮನನೊಂದು ಹೇಳಿದರು. ಕೋಮು ಹಿಂಸಾಚಾರ ತಡೆ ಮಸೂದೆಯ ಕುರಿತು ಚರ್ಚೆಗಾಗಿ ಶನಿವಾರ ಸೇರಿದ್ದ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಯ ಸಭೆಯಲ್ಲಿ ಮಾತನಾಡುತ್ತಾ ಮನಮೋಹನ್ ಸಿಂಗ್ ಈ ವಿಷಯ ಹೇಳಿದರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕೋಮು ಹಿಂಸಾಚಾರದ ಕುರಿತು ತನಿಖೆ ನಡೆಸುವ ಸಂಸ್ಥೆಗಳು ಪಕ್ಷಪಾತ ಮತ್ತು ಪೂರ್ವಗ್ರಹದಿಂದ ಮುಕ್ತವಾಗಿರಬೇಕು ಎಂದು ಪ್ರಧಾನಿ ಮನಮೋಹನ ಸಿಂಗ್‌ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಎಲ್ಲ ಸಮುದಾಯಗಳ ನಡುವೆಯೂ ಸೌಹಾರ್ದ ವಾತಾವರಣ ಮೂಡಿರುವುದು ತೃಪ್ತಿಕರ ಸಂಗತಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಮತೀಯ ಸೌಹಾರ್ದತೆ ಕಾಪಾಡುವಲ್ಲಿ ರಾಷ್ಟ್ರೀಯ ಏಕತಾ ಮಂಡಳಿಯ ಸದಸ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಆದಾಗ್ಯೂ ನಾವು ಈ ಎಲ್ಲ ವಿದ್ಯಮಾನಗಳ ಬಗ್ಗೆ ತೀವ್ರ ನಿಗಾ ವಹಿಸುವುದರೊಂದಿಗೆ ಕಾನೂನು ಸಂಸ್ಥೆಗಳು ದುರುದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಯಾಗಿರಿಸಿಕೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮನಮೋಹನ ಸಿಂಗ್‌ ಹೇಳಿದರು.

ಇತ್ತೀಚೆಗೆ ಅಜ್ಮೀರ್‌ ಶರೀಫ್‌ ದರ್ಗಾ ಹಾಗೂ ಹೈದ್ರಾಬಾದ್‌ನ ಮೆಕ್ಕಾ ಮಸೀದಿಯ ಮೇಲೆ 2007ರಲ್ಲಿ ನಡೆದ ಬಾಂಬ್‌ ದಾಳಿಯ ಸಂದರ್ಭದಲ್ಲಿ ಹಿಂದುತ್ವದ ಗುಂಪುಗಳ ಕೈವಾಡವಿದೆ ಎಂದು ಭದ್ರತಾ ಪಡೆ ನಡೆಸಿದ ತನಿಖೆಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಸಿಂಗ್‌, ಈ ಹಿಂದೆ ನಡೆದ ಎಲ್ಲ ವಿಧ್ವಂಸಕ ಕೃತ್ಯಗಳಿಗೆ ಅಲ್ಪ ಸಂಖ್ಯಾತ ಸಮುದಾಯದ ತೀವ್ರಗಾಮಿ ಗುಂಪುಗಳ ಕೈವಾಡವಿದೆ ಎಂದು ನಂಬಲಾಗುತ್ತಿತ್ತು ಎಂದು ಹೇಳಿದರು.

ತನಿಖಾ ಸಂಸ್ಥೆಗಳು ಪಕ್ಷಪಾತ ಹಾಗೂ ಪೂರ್ವಗ್ರಹದಿಂದ ಮುಕ್ತವಾಗಿರಬೇಕು ಎಂದು ಭರವಸೆ ನೀಡಬೇಕು ಎಂದು ಹೇಳಿದ ಪ್ರಧಾನಿ, ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ಮಾಧ್ಯಮಗಳೂ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡು ನಡೆಯುವ ಹಿಂಸಾಚಾರಕ್ಕೆ ಆಯಾ ರಾಜ್ಯ ಸರಕಾರಗಳೇ ಹೊಣೆಯಾಗಿರುತ್ತವೆ ಹಾಗೂ ಹಿಂಸಾಚಾರದಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆ ವಿಧಿಸುವುದು ಕೋಮು ಹಿಂಸಾಚಾರ ತಡೆ ಮಸೂದೆಯ ಪ್ರಮುಖ ಅಂಶವಾಗಿದೆ ಎಂದು ಪ್ರಧಾನಿ ಸಿಂಗ್‌ ತಿಳಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada