Webdunia - Bharat's app for daily news and videos

Install App

ಸ್ವದೇಶೀ ಚಿಂತನೆಯ ಹರಿಕಾರ ರಾಜೀವ್ ದೀಕ್ಷಿತ್ ಇನ್ನಿಲ್ಲ

Webdunia
ಮಂಗಳವಾರ, 30 ನವೆಂಬರ್ 2010 (15:48 IST)
PR
ಬಹುರಾಷ್ಟ್ರೀಯ ಕಂಪನಿಗಳಿಗೆ ತಲೆನೋವಾಗಿದ್ದ, ಸ್ವದೇಶಿ ಚಿಂತನೆಯ ಹರಿಕಾರ, ವಿಜ್ಞಾನಿ, ಖ್ಯಾತ ವಾಕ್ಪಟು ಮತ್ತು ಭಾರತ್ ಸ್ವಾಭಿಮಾನ ಆಂದೋಲನದ ಕಾರ್ಯದರ್ಶಿ ರಾಜೀವ್ ದೀಕ್ಷಿತ್ ಅವರು ಸೋಮವಾರ ತಡರಾತ್ರಿ/ಮಂಗಳವಾರ ಮುಂಜಾನೆ ಛತ್ತೀಸಗಢದ ಭಿಲಾಯ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

43 ವರ್ಷ ವಯಸ್ಸಿನವರಾಗಿದ್ದ ಅವರು ಉಕ್ಕಿನ ನಗರಿ ಭಿಲಾಯ್‌ನ ಅಪೋಲೋ ಆಸ್ಪತ್ರೆಯಲ್ಲಿ ಭಾರೀ ಹೃದಯಾಘಾತದಿಂದ ದುರ್ಮರಣವನ್ನಪ್ಪಿದರು. ಅವಿವಾಹಿತರಾಗಿದ್ದ ಅವರು ತಮ್ಮ ಜನ್ಮದಿನದಂದೇ (ನವೆಂಬರ್ 30ರ ಬೆಳಕುಹರಿಯುವ ಮುನ್ನ ಸರಿಸುಮಾರು 1.30ಕ್ಕೆ) ಸಾವನ್ನಪ್ಪಿರುವುದು ಅಭಿಮಾನಿವರ್ಗದವರ ತೀವ್ರ ಶೋಕಕ್ಕೆ ಕಾರಣವಾಗಿದೆ.

ಸೋಮವಾರ ಬೆಮೆಟ್ರಾ ಎಂಬಲ್ಲಿನ ಮೂರು ಸ್ವಾಭಿಮಾನ ಜನಜಾಗಣ ಶಿಬಿರಗಳಲ್ಲಿ ಮಾತನಾಡಿದ್ದ ಅವರು, ಉಸಿರಾಟದ ತೊಂದರೆ ಎಂದು ಹೇಳಿದಾಗ, ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು.

ಸ್ವದೇಶೀ ಆಂದೋಲನದ ಹರಿಕಾರನ ಸಾವಿನ ಸುದ್ದಿಯನ್ನು ಪ್ರಮುಖ ಮಾಧ್ಯಮಗಳು ಬಿತ್ತರಿಸದಿರುವುದು ಅಭಿಮಾನಿಗಳಿಗೆ ಈ ಸುದ್ದಿ ನಿಜವೋ, ಸುಳ್ಳೋ ಎಂಬ ಸಂದೇಹ ಹುಟ್ಟಲು ಕಾರಣವಾಗಿದ್ದು, ಮಾಧ್ಯಮಗಳ ಮೌನವು ಶಂಕೆಗೂ ಕಾರಣವಾಗಿದೆ.

ಮೃತದೇಹವನ್ನು ಮಂಗಳವಾರ ಮಧ್ಯಾಹ್ನ ರಾಯಪುರಕ್ಕೆ ತರಲಾಗಿದ್ದು, ಸಂಜೆ ವಿಶೇಷ ವಿಮಾನದಲ್ಲಿ ಹರಿದ್ವಾರಕ್ಕೆ ಒಯ್ದು, ಅಲ್ಲಿ ಬುಧವಾರ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ ಎಂದು ಮೃತರ ಕಿರಿಯ ಸಹೋದರ ಪ್ರದೀಪ್ ದೀಕ್ಷಿತ್ ತಿಳಿಸಿದ್ದಾರೆ.

1986 ರಲ್ಲಿ ಯುವ ವಿಜ್ಞಾನಿ ರಾಜೀವ್ ಅವರು, ದೇಶಾಭಿಮಾನದಿಂದ, ಬಹುರಾಷ್ಟ್ರೀಯ ಕಂಪನಿಗಳ ಹಾವಳಿಗಳ ವಿರುದ್ಧದ ಸ್ವದೇಶಿ ಚಳವಳಿ - ಆಜಾದಿ ಬಚಾವೊ ಆಂದೋಲನವನ್ನು ನಡೆಸಿದರು. ಜೀಕ್ಷಿತ್ ಅವರು ಭಾರತ್ ಸ್ವಾಭಿಮಾನ ಟ್ರಸ್ಟ್‌ನ ರಾಷ್ಟ್ರೀಯ ವಕ್ತಾರರೂ ಆಗಿದ್ದರು.

ಸ್ವದೇಶೀ ಚಳುವಳಿಯ ಮೂಲಕ ದೇಶೀಯ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುತ್ತಾ, ನಮ್ಮ ಅಭಿವೃದ್ಧಿಗೆ ನಾವೇ ಸಹಕರಿಸೋಣ ಎಂಬ ಸಂದೇಶದೊಂದಿಗೆ ಸ್ವಾವಲಂಬನೆಯತ್ತ ಜನರನ್ನು ಮುನ್ನಡೆಸುತ್ತಿದ್ದ ರಾಜೀವ್ ದೀಕ್ಷಿತ್ ಅವರು ಪತ್ರಿಕೆಗಳಲ್ಲಿ ಅಂಕಣಗಳ ಮೂಲಕವೂ ಪ್ರಸಿದ್ಧರಾಗಿದ್ದರು. ಭಾರತ್ ಬಚಾವೋ ಆಂದೋಲನದಲ್ಲಿಯೂ ಭಾಗಿಯಾಗಿರುವ ಅವರು, ಯೋಗ ಋಷಿ ಬಾಬಾ ರಾಮ್ ದೇವ್ ಅವರಿಂದ ಸ್ಥಾಪಿತವಾದ ಭಾರತ ಸ್ವಾಭಿಮಾನಿ ಆಂದೋಲನದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಕಳೆದ 20 ವರ್ಷಗಳಿಂದ ಅವರು ಸ್ವದೇಶೀ ವಸ್ತುಗಳನ್ನೇ ಬಳಸಿ ಎನ್ನುತ್ತಾ, ವಿದೇಶೀ ವಸ್ತುಗಳ ವ್ಯಾಮೋಹದಿಂದ ಜನರನ್ನು ದೂರೀಕರಿಸುತ್ತಿದ್ದರು ಮತ್ತು ವಿದೇಶೀ ಪಾನೀಯ, ತಿಂಡಿಗಳಲ್ಲಿರುವ ವಿಷಯುಕ್ತ ಅಂಶಗಳ ಬಗ್ಗೆ ಜನಜಾಗೃತಿ ಮೂಡಿಸುತ್ತಾ, ವಿದೇಶೀ ಕಂಪನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕೋಕಾ ಕೋಲಾ, ಪೆಪ್ಸಿ ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ಲಘುಪಾನೀಯಗಳಲ್ಲಿ ವಿಷಯುಕ್ತ ಅಂಶವಿದೆ ಎಂದು ಎತ್ತಿ ತೋರಿಸಿದ್ದ ರಾಜೀವ್ ದೀಕ್ಷಿತ್, ಈ ಹೋರಾಟದಲ್ಲಿ ಜೈಲಿಗೂ ಹೋಗಿದ್ದರು, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳ ಮೆಟ್ಟಿಲನ್ನೂ ಏರಿದ್ದರು. ಈ ಕುರಿತು ಸಂಶೋಧನೆ ಮಾಡಲು ದೇಶದ ಹೆಚ್ಚಿನ ಗ್ರಂಥಾಲಯಗಳನ್ನೆಲ್ಲಾ ಜಾಲಾಡಿದ್ದರು.

ದೇಶದಲ್ಲಿ 8000ದಷ್ಟು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರುತ್ತಾ, ಭಾರತೀಯರು ಶ್ರಮಪಟ್ಟು ದುಡಿದ ಹಣವನ್ನು ಉಪಯೋಗಿಸಿ ತಮ್ಮ ದೇಶಕ್ಕೆ ಲಾಭ ಮಾಡುತ್ತಿವೆ. ಅದರ ಬದಲು, ದೇಶೀ ಉತ್ಪನ್ನಗಳನ್ನೇ ಬಳಸಿದರೆ, ದೇಶೀ ಉತ್ಪಾದಕರು ಲಾಭ ಮಾಡುತ್ತಾರೆ, ದೇಶದ ಆರ್ಥಿಕತೆ ಸುಧಾರಣೆಯಾಗುತ್ತದೆ ಎಂಬುದಾಗಿ ಅವರು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದರು.

ಭಾರತೀಯತೆಯ ಕಟ್ಟಾ ಉತ್ತೇಜಕರಾಗಿದ್ದ ಅವರು, ಭಾರತೀಯ ಇತಿಹಾಸ, ಸಂವಿಧಾನ ಮತ್ತು ಆರ್ಥಿಕ ನೀತಿಯ ಕುರಿತಾಗಿಯೂ ದೇಶದ ಜನರಲ್ಲಿ ಅರಿವು ಮೂಡಿಸಲು ಶ್ರಮಿಸಿದ್ದರು. ಭಾರತದ ಆರ್ಥಿಕತೆ ಮತ್ತು ಭ್ರಷ್ಟಾಚಾರದ ಕುರಿತು ಅತ್ಯುನ್ನತ ಮಾಹಿತಿ ಹೊಂದಿದ್ದ ಅವರು, ಭ್ರಷ್ಟ ರಾಜಕಾರಣಿಗಳಿಗೆ ಸಿಂಹಸ್ವಪ್ನರಾಗಿದ್ದರು.

ಮೂಲತಃ ಉತ್ತರ ಪ್ರದೇಶದ ಅಲಹಾಬಾದ್‌ನವರಾಗಿರುವ ಅವರು, ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರೊಂದಿಗೆ ವಿಜ್ಞಾನಿಯಾಗಿ ಕೆಲಸ ಮಾಡಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments