Select Your Language

Notifications

webdunia
webdunia
webdunia
webdunia

ವಿಷ್ಣುವಿಗೆ ಪ್ರದಕ್ಷಿಣೆ ಹಾಕುತ್ತಿರುವ ವರಾಹ

ವಿಷ್ಣುವಿಗೆ ಪ್ರದಕ್ಷಿಣೆ ಹಾಕುತ್ತಿರುವ ವರಾಹ
ಹೈದರಾಬಾದ್ , ಸೋಮವಾರ, 15 ಡಿಸೆಂಬರ್ 2008 (19:17 IST)
ವರಾಹವೊಂದು ನದಿಯಲ್ಲಿ ಮುಳುಗೆದ್ದು, ವಿಷ್ಣು ದೇವಾಲಯಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ವಿಸ್ಮಯಕಾರಿ ಘಟನೆಯೊಂದು ಭಾನುವಾರದಿಂದ ನಿರಂತರ ನಡೆಯುತ್ತಿದೆ.

ಆಂಧ್ರ ಪ್ರದೇಶದ ಪೆನುಗೊಂಡ ಜಿಲ್ಲೆಯ ಪಶ್ಚಿಮಗೋದಾವರಿ ತಟದಲ್ಲಿರುವ ಸಿದ್ದಾಂತಂ ಎಂಬ ಗ್ರಾಮದಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ಈ 'ವರಾಹ ದರ್ಶನ'ವಾಗಿದೆ.

ಇತರ ಹಂದಿಗಳೊಂದಿಗೆ ಗುಂಪಿನಲ್ಲಿ ತೆರಳುತ್ತಿದ್ದ ಬಡಕಲು ದೇಹದ ಬಿಳಿಯ ಬಣ್ಣದ ಹಂದಿಯೊಂದು ಗುಂಪಿನಿಂದ ತಪ್ಪಿಸಿಕೊಂಡು ದೇವಾಲಯದತ್ತ ತೆರಳಿ ಪ್ರದಕ್ಷಿಣೆ ಹಾಕಿದೆ. ದೇವಾಲಯಕ್ಕೆ ತೆರಳುವ ಮುನ್ನ ಗೋದಾವರಿ ನದಿಯಲ್ಲಿ ಮುಳುಗಿ ದೇವಾಲಯದತ್ತ ತೆರಳಿ ದೇವಾಲಯಕ್ಕೆ ಸುತ್ತುಬರುತ್ತಿರುವ ದೃಶ್ಯವು ದೂರದರ್ಶನ ವಾಹಿನಿಗಳಲ್ಲಿ ಬಿತ್ತರವಾಗುತ್ತಿದೆ.

ಈ ವಿಸ್ಮಯಕಾರಿ ಸುದ್ದಿಯು ಬಾಯಿಂದ ಬಾಯಿಗೆ ಹಬ್ಬಿದ್ದು, ದೇವಾಲಯದಲ್ಲೀಗ ಜನರ ಜಾತ್ರೆಯೇ ನೆರೆಯುತ್ತಿದೆ.

ಗುಂಪಿನಿಂದ ತಪ್ಪಿಸಿಕೊಂಡಿರುವ ಈ ಸೂಕರವನ್ನು ಮತ್ತೆ ಮಾಲಿಕರಿಗೆ ಒಪ್ಪಿಸಿದರೂ, ಅಲ್ಲಿಂದ ಮತ್ತೆಮತ್ತೆ ತಪ್ಪಿಸಿಕೊಂಡು ಅದು ದೇವಾಲಯದತ್ತಲೇ ಮರಳುತ್ತದೆ. ಅದನ್ನು ಯಾರಾದರೂ ಮುಟ್ಟಿದರೆ ಮತ್ತೆ ನದಿಗೆ ತೆರಳಿ ಮುಳುಗೆದ್ದು ಬರುತ್ತಿರುವುದು ಜನತೆಯಲ್ಲಿ ಕುತೂಹಲ ಮೂಡಿಸಿದೆ.

ದೇವಾಲಯದ ಗರ್ಭಗುಡಿಯ ಹೊರಭಾಗದ ಅಂಗಣದಲ್ಲಿ ಬಾಲಅಲ್ಲಾಡಿಸುತ್ತಾ ಮತ್ತೆತ್ತಲೂ ತೆರಳದೆ, ದೃಷ್ಟಿಹರಿಸದೆ ಈ ಹಂದಿ ಪ್ರದಕ್ಷಿಣೆ ಬರುತ್ತಿರುವುದು ಭಕ್ತರಲ್ಲಿ ಇದು ವಿಷ್ಣುವಿನ ಅವತಾರವೇನೋ ಎಂಬ ಭಾವ ಮೂಡಿಸಿದೆ. ಭಕ್ತರು ಈ ಹಂದಿಗೆ ಅರಶಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿ ನಮಸ್ಕರಿಸುತ್ತಿದ್ದಾರೆ.

ಈ ಹಂದಿಗೆ ಹಾದಿ ತಪ್ಪಿದೆಯೇ, ಇಲ್ಲ ಆಹಾರ ಹುಡುಕಿ ಇತ್ತಕಡೆ ಬಂದಿದೆಯೇ ಎಂಬ ಪ್ರಶ್ನೆಗಳು ಮೂಡುತ್ತಿದ್ದರೂ, ಹೊರಕರೆದೊಯ್ದು ಬಿಟ್ಟರೂ ಮತ್ತೆಮತ್ತೆ ನದಿಯಲ್ಲಿ ಮುಳುಗಿ ದೇವಾಲಯದತ್ತ ಮರಳಿ ಬಂದು ಪ್ರದಕ್ಷಿಣೆ ಹಾಕುತ್ತಿರುವುದು ವಿಸ್ಮಯಕಾರಿಯಾಗಿದೆ.

Share this Story:

Follow Webdunia kannada