Select Your Language

Notifications

webdunia
webdunia
webdunia
webdunia

ವಿಪಕ್ಷಗಳ ಗಲಭೆಯಿಂದ ಸಂಸತ್ತಿನ ಕಲಾಪ ಸ್ಥಗಿತ

ವಿಪಕ್ಷಗಳ ಗಲಭೆಯಿಂದ ಸಂಸತ್ತಿನ ಕಲಾಪ ಸ್ಥಗಿತ
ನವದೆಹಲಿ , ಮಂಗಳವಾರ, 7 ಮೇ 2013 (14:50 IST)
PTI
ದಿನಕ್ಕೊಂದರಂತೆ ಬಯಲಾಗುತ್ತಿರುವ ಹಗರಣಗಳಿಂದ ಸರಕಾರ ಕಂಗಾಲಾಗಿರುವಾಗಲೇ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌, ಕೇಂದ್ರ ಸಚಿವರಾದ ಪವನ್‌ ಕುಮಾರ್‌ ಬನ್ಸಲ್‌ ಮತ್ತು ಅಶ್ವನಿ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ಗಲಭೆ ಎಬ್ಬಿಸಿದ ಪರಿಣಾಮವಾಗಿ ಉಭಯ ಸದನಗಳಲ್ಲಿ ಯಾವುದೇ ಕಲಾಪ ನಡೆಯಲಿಲ್ಲ.

ರೈಲ್ವೆ ಸಚಿವ ಬನ್ಸಲ್‌ ಮತ್ತು ಕಾನೂನು ಸಚಿವ ಅಶ್ವನಿ ಕುಮಾರ್‌ ರಾಜೀನಾಮೆ ಬೇಡಿಕೆಯನ್ನು ಸರಕಾರ ತಿರಸ್ಕರಿಸಿದುದರಿಂದ ಮಧ್ಯಾಹ್ನದ ಭೋಜನ ವಿರಾಮಕ್ಕೆ ಮೊದಲು ಲೋಕಸಭೆ ಮತ್ತು ರಾಜ್ಯಸಭೆ ಎರಡೆರಡು ಸಲ ಮುಂದೂಡಲ್ಪಟ್ಟಿತು. ಭೋಜನದ ಬಳಿಕವೂ ವಿಪಕ್ಷ ರಾಜೀನಾಮೆಗೆ ಪಟ್ಟು ಹಿಡಿದ ಪರಿಣಾಮವಾಗಿ ಕಲಾಪಭಂಗವಾಗಿ ಉಭಯ ಸದನಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಎಪ್ರಿಲ್‌ 22ರಂದು ಬಜೆಟ್‌ ಅಧಿವೇಶನದ ಎರಡನೇ ಚರಣ ಪ್ರಾರಂಭವಾದಂದಿನಿಂದ ಒಂದು ದಿನವೂ ಕಲಾಪ ನಡೆದಿಲ್ಲ. ಅವ್ಯವಸ್ಥೆಯೇ ಸಂಸತ್ತಿನ ವ್ಯವಸ್ಥೆಯಾಗಿದೆ.

webdunia
PTI
ವಾರಾಂತ್ಯದ ರಜೆಯ ಬಳಿಕ ಇಂದು ಪೂರ್ವಾಹ್ನ 11.00 ಗಂಟೆಗೆ ಸದನ ಸಮಾವೇಶಗೊಂಡಾಗಲೇ ವಿಪಕ್ಷ ಬನ್ಸಲ್‌ ಅಳಿಯ ರೈಲ್ವೆಯ ಆಯಕಟ್ಟಿನ ಹುದ್ದೆ ಕೊಡಿಸಲು ಲಂಚ ಸ್ವೀಕರಿಸಿ ಸಿಕ್ಕಿ ಬಿದ್ದಿರುವ ಮತ್ತು ಕಲ್ಲಿದ್ದಲು ಹಗರಣದ ತನಿಖಾ ವರದಿಯನ್ನು ಕಾನೂನು ಸಚಿವ ಅಶ್ವನಿ ಕುಮಾರ್‌ ತಿದ್ದಿರುವ ವಿಚಾರವನ್ನು ಹಿಡಿದುಕೊಂಡು ಗದ್ದಲ ಪ್ರಾರಂಭಿಸಿತು. ಬಿಜೆಪಿ ಮತ್ತು ವಾಮಪಕ್ಷ ಸದಸ್ಯರು ಉಭಯ ಸದನಗಳಲ್ಲಿ ಸಭಾಪತಿ ಪೀಠದ ಎದುರು ಜಮಾಯಿಸಿ ಘೋಷಣೆಗಳನ್ನು ಕೂಗಿದರು.

ಇದೇ ವೇಳೆ ಅಕಾಲಿ ದಳ ಸದಸ್ಯರು 1984ರ ಸಿಖ್‌ ನರಮೇಧದ ಆರೋಪಿಯಾಗಿದ್ದ ಕಾಂಗ್ರೆಸ್‌ ನಾಯಕ ಸಜ್ಜನ್‌ ಕುಮಾರ್‌ ಖುಲಾಸೆಗೊಂಡಿರುವುದನ್ನು ಪ್ರತಿಭಟಿಸಿ ಕೋಲಾಹಲವುಂಟು ಮಾಡಿ ಅವರ ವಿರುದ್ಧ ಹೊಸದಾಗಿ ತನಿಖೆ ನಡೆಸಲು ಸರ್ವೋಚ್ಚ ನ್ಯಾಯಾಲಯದ ಕಣ್ಗಾವಲಿನಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದು ಒತ್ತಾಯಿಸಿದರು.

ರಾಜ್ಯಸಭೆಯಲ್ಲೂ ಇದೇ ಮಾದರಿಯ ದೃಶ್ಯಗಳು ಪುನರಾವರ್ತನೆಯಾಗಿ ಯಾವುದೇ ಕಲಾಪ ನಡೆಯಲಿಲ್ಲ. ಅಬ್‌ ಯೇ ಸ್ಪಷ್ಟ್ ಹೈ ಪೂರಿ ಕಾಂಗ್ರೆಸ್‌ ಭ್ರಷ್ಟ್ ಹೈ ಎನ್ನುವ ಘೋಷಣೆಯನ್ನು ವಿಪಕ್ಷ ಸದಸ್ಯರು ಕೂಗಿದರು.

Share this Story:

Follow Webdunia kannada