Select Your Language

Notifications

webdunia
webdunia
webdunia
webdunia

ವಿಕಿಲೀಕ್ಸ್; ಅಮೆರಿಕದ ಇಬ್ಬಂದಿತನ ಬಯಲು

ವಿಕಿಲೀಕ್ಸ್; ಅಮೆರಿಕದ ಇಬ್ಬಂದಿತನ ಬಯಲು
ಭಾರತದ ಕುರಿತು ಅಮೆರಿಕದ ಅಭಿಪ್ರಾಯಗಳುಳ್ಳ ರಹಸ್ಯ ಮಾಹಿತಿಗಳಿವೆ ಎಂದು ಹೇಳಲಾಗುತ್ತಿರುವ ವಿಕಿಲೀಕ್ಸ್ ದಾಖಲೆಗಳ ಚೂರು-ಪಾರು ಸಂಗತಿಗಳು ಅಲ್ಲಲ್ಲಿ ಸೋರಿಕೆಯಾಗುತ್ತಿರುವಂತೆಯೇ, ಸ್ಪಷ್ಟನೆಗಳೂ, ಮುಖ ಮುಚ್ಚಿಕೊಳ್ಳುವ ಹೇಳಿಕೆಗಳೂ ಪುಂಖಾನುಪುಂಖವಾಗಿ ಬರತೊಡಗಿವೆ.

ಈ ನಡುವೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆಗಳು ಮತ್ತು ಅಣ್ವಸ್ತ್ರ ಒಪ್ಪಂದಕ್ಕೆ ಸಂಬಂಧಿಸಿದಂತೆ ಹಿಂದಿನ ಯುಪಿಎ ಸರಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ಗೊತ್ತುವಳಿ ವೇಳೆ ಸಂಸದರ ಖರೀದಿ ಕುರಿತ ಮಾಹಿತಿಗಳುಳ್ಳ ವರದಿಗಳನ್ನೂ ವಿಕಿಲೀಕ್ಸ್ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಆನ್‌ಲೈನ್‌ನಲ್ಲಿ ಹರಿಯಬಿಟ್ಟಿದ್ದಾರೆ. ಇದಕ್ಕೆ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲ.

ವಿಕಿಲೀಕ್ಸ್ ಬಹಿರಂಗಪಡಿಸಿರುವ ಒಟ್ಟು ದಾಖಲೆಗಳ ಸಂಖ್ಯೆ 2,51,287. ಅವುಗಳಲ್ಲಿ 11,000 ದಾಖಲೆಗಳು ರಹಸ್ಯವಾದುವು. ಒಟ್ಟಾರೆ 9,000 ವಿದೇಶೀಯರಿಗೆ ನಿಷಿದ್ಧವಾದುವು. ಇದರಲ್ಲಿ ವಿಶ್ವದಾದ್ಯಂತದ ಹಲವು ದೇಶಗಳ ಕುರಿತು ಅಮೆರಿಕಾವು ತಳೆದಿರುವ ನಿಲುವುಗಳು, ನಡೆಸಿರುವ ಮಾತುಕತೆಗಳ ರಹಸ್ಯ ವಿವರಣೆಗಳಿವೆ.

2.51 ಲಕ್ಷಕ್ಕೂ ಹೆಚ್ಚಿನ ದಾಖಲೆಗಳಲ್ಲಿ 3,038 ದಾಖಲೆಗಳು ನವದೆಹಲಿಯಲ್ಲಿನ ಅಮೆರಿಕಾದ ರಾಯಭಾರ ಕಚೇರಿಗೆ ಸಂಬಂಧಪಟ್ಟವು. ಇದರಲ್ಲಿ 194 ಸೀಕ್ರೆಟ್, 1445 ಕಾನ್ಫಿಡೆನ್ಶಿಯಲ್ ಹಾಗೂ 1399 ರಹಸ್ಯವಲ್ಲದ ದಾಖಲೆಗಳಿವೆ. ಇವುಗಳಲ್ಲಿ ಭಾರತದ ಕುರಿತು ಅನೇಕ ಉಲ್ಲೇಖಗಳನ್ನು ಮಾಡಲಾಗಿದ್ದು, ಶೀಘ್ರದಲ್ಲೇ ಸಂಪೂರ್ಣ ಮಾಹಿತಿ ಸಿಗುವ ನಿರೀಕ್ಷೆಗಳಿವೆ.

ಟರ್ಕಿ ನೇತೃತ್ವದಲ್ಲಿ ಇಸ್ತಾನ್‌ಬುಲ್‌ನಲ್ಲಿ ನಡೆದ ಅಫಘಾನಿಸ್ತಾನ ಕುರಿತ ಸಭೆಗೆ ಭಾರತವನ್ನು ಅಮೆರಿಕಾ ಉದ್ದೇಶಪೂರ್ವಕವಾಗಿ ಆಹ್ವಾನಿಸಿರಲಿಲ್ಲ. ಇದಕ್ಕಿದ್ದ ಕಾರಣ ಅಫ್ಘಾನ್‌ನಿಂದ ಭಾರತವನ್ನು ದೂರ ಇಡಬೇಕು ಎಂಬ ಪಾಕಿಸ್ತಾನದ ಒತ್ತಡ ಎಂಬುದು ವಿಕಿಲೀಕ್ಸ್ ಬಹಿರಂಗಪಡಿಸಿದ ಮಾಹಿತಿ.

ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯಲು ಭಾರೀ ಯತ್ನ ನಡೆಸುತ್ತಿದೆ. ಈ ಯತ್ನದ ಚಟುವಟಿಕೆಗಳ ಬಗ್ಗೆ ಬೇಹುಗಾರಿಕೆ ನಡೆಸಿ ಎಂದು 2009ರ ಜುಲೈ 31ರಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಆದೇಶ ನೀಡಿದ್ದರು. ಅಲ್ಲದೆ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯಲು ಸ್ವಘೋಷಿತ ಅಭ್ಯರ್ಥಿ ಎಂದು ಲೇವಡಿ ಮಾಡಿದ್ದರು ಎಂದೂ ವಿಕಿಲೀಕ್ಸ್ ದಾಖಲೆಗಳು ಹೇಳಿವೆ.

Share this Story:

Follow Webdunia kannada