Select Your Language

Notifications

webdunia
webdunia
webdunia
webdunia

ರಾವ್ ರಾಜ್ಯತ್ಯಾಗ, ಆಳ್ವಾ ಔಟ್: ದೇಶ್‌ಮುಖ್ ನಿರಾಳ

ರಾವ್ ರಾಜ್ಯತ್ಯಾಗ, ಆಳ್ವಾ ಔಟ್: ದೇಶ್‌ಮುಖ್ ನಿರಾಳ
ಮುಂಬಯಿ , ಬುಧವಾರ, 12 ನವೆಂಬರ್ 2008 (13:01 IST)
ಮಾರ್ಗರೆಟ್ ಆಳ್ವಾ ಕರ್ನಾಟಕದ ಕಾಂಗ್ರೆಸ್ ವರಿಷ್ಠ ನಾಯಕಿಯಾಗಿದ್ದರೂ, ಅವರಾಡಿದ ಮಾತುಗಳು ಮತ್ತು ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಕಾಂಗ್ರೆಸ್ ಇರಾದೆ... ಎಲ್ಲವೂ ಹೆಚ್ಚು ಪರಿಣಾಮ ಬೀರುವುದು ಮಹಾರಾಷ್ಟ್ರದ ಮೇಲೆ. ಇದಕ್ಕೆ ಪ್ರಧಾನ ಕಾರಣವೆಂದರೆ. ಮ್ಯಾಗಿ ಅವರ ಕರ್ಮ ಭೂಮಿ ಮಹಾರಾಷ್ಟ್ರ.

ಮ್ಯಾಗಿ ಮೇಲೆ ಕಾಂಗ್ರೆಸ್ ನಾಯಕತ್ವವು ಕ್ರಮ ಕೈಗೊಳ್ಳುವುದು ಅಲ್ಲಿನ ಬಂಡಾಯ ಮುಖಂಡ ಎಂದೇ ಜನಜನಿತರಾದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಅವರ ಬದ್ಧ ರಾಜಕೀಯ ವಿರೋಧಿ, ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಒಂದಿಷ್ಟು ನಿಟ್ಟುಸಿರು ಬಿಡುವಂತಾಗಿದೆ.

ಎರಡು ದಶಕಗಳ ಕಾಲ ಶಿವಸೇನೆಯಲ್ಲಿದ್ದು ಕಾಂಗ್ರೆಸ್ ಸೇರಿದ ನಾರಾಯಣ ರಾಣೆ ಅವರನ್ನು ಬೆಳೆಸಿದ ಕೀರ್ತಿ ಮಾರ್ಗರೆಟ್ ಆಳ್ವಾರಿಗೆ ಸಲ್ಲುತ್ತದೆ. ಇತ್ತೀಚೆಗೆ ಹಣದುಬ್ಬರದ ಕುರಿತಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೇ ಟೀಕಿಸಿದ್ದ ರಾಣೆ, ಆ ಬಳಿಕ ಮಾತು ಹಿಂತೆಗೆದುಕೊಂಡಿದ್ದರಾದರೂ, ಮಹಾರಾಷ್ಟ್ರದಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಎತ್ತಿ ತೋರಿಸಿದ್ದರು.

ಇದೀಗ ಆಳ್ವಾ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಟ್ಟದಿಂದ ಇಳಿದಿರುವುದು, ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿಯಾಗಿದ್ದ ಪ್ರಭಾ ರಾವ್ ಅವರನ್ನು ಹಿಮಾಚಲ ಪ್ರದೇಶ ರಾಜ್ಯಪಾಲರಾಗಿ ಕಳುಹಿಸಿರುವುದರಿಂದಾಗಿ ದೇಶ್‌ಮುಖ್‌ಗೆ ಮಹಾರಾಷ್ಟ್ರ ಕಾಂಗ್ರೆಸ್ ಘಟಕದಲ್ಲಿದ್ದ ಎಲ್ಲ ವಿರೋಧಿಗಳು ದೂರ ಸರಿದಂತಾಗಿದೆ.

ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಸೇರಿದಂದಿನಿಂದಲೂ ರಾವ್ ಮತ್ತು ಆಳ್ವಾ ಅವರು ರಾಣೆಯನ್ನು ಬೆಂಬಲಿಸುತ್ತಿದ್ದರು. 2005ರಲ್ಲಿ ಕಾಂಗ್ರೆಸಿಗೆ ಏಳು ಮಂದಿ ಶಾಸಕರೊಂದಿಗೆ ಪಕ್ಷಾಂತರ ಮಾಡಿದ್ದ ರಾಣೆ, ಆ ಬಳಿಕ ಅವರಲ್ಲಿ ಆರು ಮಂದಿ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಿನಲ್ಲಿ ಆರಿಸಿ ಬರುವಂತೆಯೂ ನೋಡಿಕೊಂಡಿದ್ದರು. ಇದರಿಂದಾಗಿ ಕಾಂಗ್ರೆಸ್ ಪಕ್ಷವು ರಾಜ್ಯ ವಿಧಾನಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿತ್ತು. ಅಂದಿನಿಂದ ರಾವ್ ಮತ್ತು ಆಳ್ವಾ ಅವರು ರಾಣೆಯನ್ನು ದಿಲ್ಲಿ ಹೈಕಮಾಂಡ್ ಎದುರು ಭಾರೀ ಬೆಂಬಲವಿರುವ ಜನ ನಾಯಕ ಎಂದೇ ಬಿಂಬಿಸುತ್ತಿದ್ದರು.

ವಾಸ್ತವವಾಗಿ, ಪ್ರತಿ ಬಾರಿಯೂ ರಾಣೆ ಅವರು ದೇಶ್‌ಮುಖ್ ವಿರುದ್ಧ ಹರಿ ಹಾಯ್ದಾಗ, ಮಹಾರಾಷ್ಟ್ರದ ಉಸ್ತುವಾರಿ ವಹಿಸಿರುವ ಪ್ರಧಾನ ಕಾರ್ಯದರ್ಶಿ ಆಳ್ವರೇ ರಾಣೆಯನ್ನು ಬೆಂಬಲಿಸುತ್ತಿದ್ದರು. ಇದೀಗ ಆಳ್ವಾ ಕೂಡ ದೂರ ಸರಿದಿರುವುದರೊಂದಿಗೆ ರಾಣೆ ಎದುರು ವಿಲಾಸರಾವ್ ದೇಶಮುಖ್ ಒಂದು ಕೈ ಮೇಲೆ ಆದಂತಾಗಿದೆ.

Share this Story:

Follow Webdunia kannada