Select Your Language

Notifications

webdunia
webdunia
webdunia
webdunia

ರಾಣೆ ಬೆಂಬಲಿಗರು-ಕಾಂಗ್ರೆಸಿಗರ ನಡುವೆ ಹೊಯ್ ಕೈ!

ರಾಣೆ ಪತ್ರನೂ ಕಾಂಗ್ರೆಸ್‌ನಿಂದ ಉಚ್ಚಾಟನೆ

ರಾಣೆ ಬೆಂಬಲಿಗರು-ಕಾಂಗ್ರೆಸಿಗರ ನಡುವೆ ಹೊಯ್ ಕೈ!
ಮುಂಬೈ , ಬುಧವಾರ, 10 ಡಿಸೆಂಬರ್ 2008 (19:25 IST)
ಮಹಾರಾಷ್ಟ್ರ ಕಾಂಗ್ರೆಸ್ ಮತ್ತು ನಾರಾಯಣ ರಾಣೆ ಅವರ ನಡುವಿನ ಶೀತಲ ಸಮರ ಬುಧವಾರ ಸ್ಫೋಟಗೊಂಡಿದ್ದು, ರಾಣೆ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪೊಲೀಸರ ಸಮ್ಮುಖದಲ್ಲೇ ಹೊಯ್ ಕೈ ನಡೆದಿದೆ.

ಮಹಾರಾಷ್ಟ್ರದ ಮಾಜಿ ಕಂದಾಯ ಸಚಿವ ನಾರಾಯಣ ರಾಣೆವರ ಪುತ್ರ ನಿತೀಶ್ ರಾಣೆಯವರನ್ನು ಕಾಂಗ್ರೆಸ್ ಉಚ್ಚಾಟನೆಗೊಳಿಸಿದಾಗ ಮುಂಬೈಯಲ್ಲಿರುವ ಪಕ್ಷದ ಮುಖ್ಯಕಚೇರಿ ಎದುರುಗಡೆ ಮಾರಾಮಾರಿ ನಡೆದಿತ್ತು. ನಿತೀಶ್ ಅವರು ಮುಂಬೈ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರನ್ನು ಪಕ್ಷದಿಂದ ಅಮಾನತ್ತುಗೊಳಿಸಲಾಗಿತ್ತು.

ಮಾರಾಮಾರಿಯಲ್ಲಿ ತೊಡಗಿದ್ದ ಉಭಯ ಬಣಗಳನ್ನು ಚದುರಿಸಲು ಪೊಲೀಸರು ಲಾಠಿಛಾರ್ಜ್ ಮಾಡಬೇಕಾಯಿತು.

ಮುಂಬೈ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ವಿಲಾಸ್‌ರಾವ್ ದೇಶ್‌ಮುಖ್ ಅವರ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ನಾರಾಯಣ ರಾಣೆ, ತನ್ನ ಆಸೆ ಕೈಗೂಡದೆ ಆ ಪಟ್ಟ ಅಶೋಕ ಚವ್ಹಾಣ್ ಅವರ ಪಾಲಾದಾಗ ಬಹಿರಂಗ ಬಂಡಾಯ ಎದ್ದಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದರು.

ಚೌವ್ಹಾಣ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯೇ ಅಲ್ಲ ಎಂದಿದ್ದ ರಾಣೆ, ಅವರು ತಮ್ಮ ಖಾತೆಯನ್ನು ನಿಭಾಯಿಸುವಲ್ಲೂ ಸೋತಿದ್ದಾರೆ ಎಂದು ಟೀಕಿಸಿದ್ದರು.

ಈ ಹಿನ್ನೆಲೆಯಲ್ಲಿ ಪಕ್ಷವಿರೋಧಿ ವರ್ತನೆಗಾಗಿ ನಾರಾಯಣ ರಾಣೆಯವರನ್ನು ಪಕ್ಷವು ಅಮಾನತ್ತುಗೊಳಿಸಿತ್ತು.

Share this Story:

Follow Webdunia kannada