Select Your Language

Notifications

webdunia
webdunia
webdunia
webdunia

ಯಡ್ಡಿ ಕೆಳಗಿಳಿಸಿ, ಕರ್ನಾಟಕ ಉಳಿಸಿ: ಸಂಸತ್ತಲ್ಲಿ ಕಾಂಗ್ರೆಸ್

ಯಡ್ಡಿ ಕೆಳಗಿಳಿಸಿ, ಕರ್ನಾಟಕ ಉಳಿಸಿ: ಸಂಸತ್ತಲ್ಲಿ ಕಾಂಗ್ರೆಸ್
ನವದೆಹಲಿ , ಸೋಮವಾರ, 22 ನವೆಂಬರ್ 2010 (12:21 IST)
ಸ್ವಜನಪಕ್ಷಪಾತ ಮತ್ತು ಭೂ ಹಗರಣಗಳಲ್ಲಿ ಸಿಲುಕಿ ಅತಂತ್ರಗೊಂಡಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ತನ್ನ ಹೋರಾಟವನ್ನು ಬಿಗಿಗೊಳಿಸಿದ್ದು, ಮುಖ್ಯಮಂತ್ರಿಯನ್ನು ವಜಾಗೊಳಿಸಿ ಎಂದು ಸಂಸತ್ತಿನ ಉಭಯ ಸದನಗಳಲ್ಲಿ ಆಗ್ರಹಿಸಿದೆ.

ಕೆಲ ದಿನಗಳ ಹಿಂದಷ್ಟೇ ಮುಂಬೈ ಕಟ್ಟಡ ಕುಸಿತಕ್ಕೆ ಬಲಿಯಾದವರಿಗೆ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಸಂತಾಪ ಸೂಚಿಸಿದ ಬೆನ್ನಿಗೆ 2ಜಿ ತರಂಗಾಂತರ ಹಂಚಿಕೆ ಅವ್ಯವಹಾರಗಳ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಸಬೇಕು ಎಂದು ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮುಂದುವರಿಸಿದರು.

ಈ ಹೊತ್ತಿನಲ್ಲಿ ಪ್ರತಿತಂತ್ರ ಹೂಡಿದ ಕಾಂಗ್ರೆಸ್ ಸದಸ್ಯರು, ಕರ್ನಾಟಕದ ವಿಚಾರವನ್ನೆತ್ತಿಕೊಂಡು ಕೋಲಾಹಲ ಸೃಷ್ಟಿಸಿದರು. ಇದೇ ಪರಿಸ್ಥಿತಿ ರಾಜ್ಯಸಭೆಯಲ್ಲೂ ಕಂಡು ಬಂದಿದೆ. ಎರಡೂ ಸದನಗಳನ್ನು ನಾಳೆಗೆ ಮುಂದೂಡಲಾಗಿದೆ.

'ಕರ್ನಾಟಕವನ್ನು ಗಣಿ ಮಾಫಿಯಾದಿಂದ ರಕ್ಷಿಸಲು ಯಡಿಯೂರಪ್ಪನವರನ್ನು ಶಿಕ್ಷಿಸಿ', 'ಬಳ್ಳಾರಿ ಸಹೋದರರ ವಿರುದ್ಧ ಪ್ರಕರಣ ದಾಖಲಿಸಿ', 'ಯಡಿಯೂರಪ್ಪರನ್ನು ವಜಾಗೊಳಿಸಿ' ಎಂಬ ಭಿತ್ತಿಪತ್ರಗಳನ್ನು ಹಿಡಿದ ಕಾಂಗ್ರೆಸ್ ಸಂಸದರು ಘೋಷಣೆಗಳನ್ನು ಕೂಡ ಕೂಗಿದರು.

ಈ ಹೊತ್ತಿಗೆ ಕಾಂಗ್ರೆಸ್ ಸದಸ್ಯರನ್ನು ಸಚಿವರುಗಳೇ ಗದರಿಸಿದ ಪ್ರಸಂಗವೂ ನಡೆದಿದೆ. ಅಧೀರ್ ರಂಜನ್ ಚೌಧರಿ ಎಂಬ ಕಾಂಗ್ರೆಸ್ ಸಂಸದರ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದಾಗ ಕೋಪಗೊಂಡ ಲೋಕಸಭೆಯ ನಾಯಕ ಪ್ರಣಬ್ ಮುಖರ್ಜಿ, ಹಾಗೆ ಮಾಡದಂತೆ ಸೂಚಿಸಿದರು.

ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿಯಬಾರದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ. ಭನ್ಸಾಲ್ ಕೂಡ ಒತ್ತಾಯಿಸಿದರು.

ಬಿಜೆಪಿ, ಎಐಎಡಿಎಂಕೆ, ಸಮಾಜವಾದಿ ಪಕ್ಷ, ಶಿವಸೇನೆ ಮತ್ತು ಕಾಂಗ್ರೆಸ್ ಸದಸ್ಯರು ಪರ-ವಿರೋಧ ಘೋಷಣೆಗಳನ್ನು ಕೂಗುತ್ತಾ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ, ಮೀರಾ ಕುಮಾರ್ ಸದನವನ್ನು ನಾಳೆಗೆ ಮುಂದೂಡಿದರು.

ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿ ಸದನಕ್ಕೆ ಬರುತ್ತಿದ್ದಂತೆ ಬಿಜೆಪಿ ಮತ್ತು ಎಐಎಡಿಎಂಕೆ ಸದಸ್ಯರು 2ಜಿ ಹಗರಣಕ್ಕೆ ಸಂಬಂಧಪಟ್ಟಂತೆ ಜೆಪಿಸಿ ತನಿಖೆಗೆ ಒತ್ತಾಯಿಸಿದರು. ಕಾಂಗ್ರೆಸ್ ಸದಸ್ಯರು ಕರ್ನಾಟಕದ ಭೂ ಹಗರಣದ ಕುರಿತು ಪ್ರತಿಭಟಿಸಿದರು.

ಇಲ್ಲೂ ಕರ್ನಾಟಕ ಮುಖ್ಯಮಂತ್ರಿಯನ್ನು ವಜಾಗೊಳಿಸಿ ಎಂಬ ಬೇಡಿಕೆಯನ್ನು ಹೊತ್ತ ಭಿತ್ತಿಪತ್ರಗಳನ್ನು ಕೆಲವು ಸದಸ್ಯರು ಪ್ರದರ್ಶಿಸಿದರು.

ಆದರೂ ಪ್ರಶ್ನೋತ್ತರ ವೇಳೆಯನ್ನು ಆರಂಭಿಸಲು ಅನ್ಸಾರಿ ಯತ್ನಿಸಿದರು. ಭಿತ್ತಿಪತ್ರಗಳನ್ನು ಪ್ರದರ್ಶಿಸಬೇಡಿ, ದಿನದ ಮೊದಲ ಪ್ರಶ್ನೆಯನ್ನು ಆರಂಭಿಸಿ ಎಂದರೂ ಸದಸ್ಯರು ಪಟ್ಟು ಸಡಿಸಲಿಲ್ಲ. ಕೊನೆಗೆ ಕಲಾಪವನ್ನು ಮುಂದೂಡಿದರು.

Share this Story:

Follow Webdunia kannada