Select Your Language

Notifications

webdunia
webdunia
webdunia
webdunia

ಮಾಯಾವತಿ ಸ್ತ್ರೀ ಸಬಲೀಕರಣದ ಪ್ರತೀಕ: ಸೋನಿಯಾ

ಮಾಯಾವತಿ ಸ್ತ್ರೀ ಸಬಲೀಕರಣದ ಪ್ರತೀಕ: ಸೋನಿಯಾ
ನವದೆಹಲಿ , ಶನಿವಾರ, 19 ಮಾರ್ಚ್ 2011 (13:13 IST)
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಎಷ್ಟು ಬದ್ಧ ವೈರಿಗಳು ಎಂದು ಎಲ್ಲರಿಗೂ ಗೊತ್ತಿರುವಂತದ್ದೇ. ಆದರೆ ಜಾಗತಿಕ ವೇದಿಕೆಯೊಂದರಲ್ಲಿ ದಲಿತ ನಾಯಕಿಯನ್ನು ಸೋನಿಯಾ ಅಪಾದಮಸ್ತಕ ಬಣ್ಣಿಸಿದ್ದಾರೆ. ಅವರು ಮಹಿಳೆಯರ ಸಬಲೀಕರಣದ ಸಂಕೇತ ಎಂದು ಹೊಗಳಿದ್ದಾರೆ.

ಇದು ನಡೆದಿರುವುದು ಲಂಡನ್‌ನಲ್ಲಿ ನಡೆದ 'ಕಾಮನ್‌ವೆಲ್ತ್ ಲೆಕ್ಚರ್' ಸಮಾರಂಭದಲ್ಲಿ. ಭಾರತೀಯ ಮಹಿಳೆಯರ ವಿಮೋಚನಾ ಚಳವಳಿಯ ಕುರಿತು ಭಾಷಣ ಮಾಡಿದ ಅವರು, ಶತಮಾನಗಳಿಂದ ಶೋಷಣೆಗೀಡಾದ ಸಮಾಜದ ಒಂದು ಸಮುದಾಯದಿಂದ ಬಂದ ಮಹಿಳೆ ಇಂದು ಭಾರತದ ಅತಿ ಜನಸಂಖ್ಯೆ ಹೊಂದಿರುವ ರಾಜ್ಯದ ಮುಖ್ಯಮಂತ್ರಿ ಎಂದು ಉಲ್ಲೇಖಿಸಿದರು.

ಭಾರತದ ರಾಷ್ಟ್ರಪತಿ (ಪ್ರತಿಭಾ ದೇವಿ ಸಿಂಗ್ ಪಾಟೀಲ್) ಮಹಿಳೆ, ಲೋಕಸಭೆಯ ಸ್ಪೀಕರ್ (ಮೀರಾ ಕುಮಾರ್) ಮಹಿಳೆ, ಪ್ರತಿಪಕ್ಷದ ನಾಯಕಿ (ಸುಷ್ಮಾ ಸ್ವರಾಜ್) ಮಹಿಳೆ ಎಂದು ತನ್ನ ಮಾತಿನಲ್ಲಿ ಉಲ್ಲೇಖಿಸುತ್ತಿದ್ದ ಸಂದರ್ಭದಲ್ಲಿ ಮಾಯಾವತಿಯವರ ಹೆಸರನ್ನು ಭಾಷಣದಲ್ಲಿ ವಿಶೇಷವಾಗಿ ಸೋನಿಯಾ ಗಾಂಧಿ ಪ್ರಸ್ತಾಪಿಸಿದರು.

ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ -- ಎರಡೂ ಉತ್ತರ ಪ್ರದೇಶದಲ್ಲಿ ದಲಿತ ರಾಜಕೀಯ ಮಾಡುತ್ತ ಬಂದಿರುವ ಪಕ್ಷಗಳು. ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಪ್ರಭಾವವು ಉತ್ತರ ಪ್ರದೇಶದಲ್ಲಿ ವೃದ್ಧಿಗೊಂಡ ಬಳಿಕವಂತೂ ಇದು ತಾರಕಕ್ಕೇರಿದೆ. ದಲಿತರನ್ನು ಓಲೈಸಲು ಎರಡೂ ಪಕ್ಷಗಳು ಭಾರೀ ಸರ್ಕಸ್‌ಗಳನ್ನು ಮಾಡುತ್ತಿವೆ.

ಈ ನಡುವೆ ಸೋನಿಯಾ ಗಾಂಧಿಯವರು ಮಾಯಾವತಿಯವರನ್ನು ಪ್ರಶಂಸಿಸಿರುವುದು ಹಲವರ ಹುಬ್ಬೇರಿಸಿದೆ. ಸ್ವತಃ ಕಾಂಗ್ರೆಸ್ ಪಕ್ಷದೊಳಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆದರೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮೆಚ್ಚುಗೆ ಸೂಚಿಸಿದ್ದಾರೆ. ನೆಹರು-ಗಾಂಧಿ ಕುಟುಂಬವು ಇಂತಹ ಉದಾರತೆಯಿಂದಲೇ ಗುರುತಿಸಿಕೊಂಡಿದೆ. ಇದು ರಾಜಕೀಯವಾಗಿಯೂ ಮಹತ್ವವಾದದ್ದು ಎಂದಿದ್ದಾರೆ.

Share this Story:

Follow Webdunia kannada