Select Your Language

Notifications

webdunia
webdunia
webdunia
webdunia

ಫತ್ವಾ, ವಿರೋಧದ ನಡುವೆಯೂ 'ಸೂರ್ಯ ನಮಸ್ಕಾರ' ಯಶಸ್ವಿ

ಫತ್ವಾ, ವಿರೋಧದ ನಡುವೆಯೂ 'ಸೂರ್ಯ ನಮಸ್ಕಾರ' ಯಶಸ್ವಿ
ಭೋಪಾಲ್ , ಶುಕ್ರವಾರ, 13 ಜನವರಿ 2012 (09:11 IST)
ND
ಮುಸ್ಲಿಮ್ ಧರ್ಮಗುರುಗಳ ಫತ್ವಾ, ಕ್ರಿಶ್ಚಿಯನ್ ಸಮುದಾಯ ಹಾಗೂ ವಿರೋಧ ಪಕ್ಷಗಳ ಪ್ರತಿಭಟನೆ ನಡುವೆಯೇ ಮಧ್ಯಪ್ರದೇಶದಾದ್ಯಂತ ಗುರುವಾರ ಗಿನ್ನೆಸ್ ದಾಖಲೆಗಾಗಿ ನಡೆದ ಸೂರ್ಯ ನಮಸ್ಕಾರ ಯೋಗ ಕಾರ್ಯಕ್ರಮದಲ್ಲಿ ಸುಮಾರು 50 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದರು.

ಈ ಸೂರ್ಯ ನಮಸ್ಕಾರದ ಕಾರ್ಯಕ್ರಮದ ಮೂಲಕ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಧ್ಯಪ್ರದೇಶದ ಸರ್ಕಾರ ಗಿನ್ನೆಸ್ ದಾಖಲೆ ನಿರ್ಮಾಣದ ಆಶಯ ಹೊಂದಿದೆ.

ಸ್ವಾಮಿ ವಿವೇಕಾನಂದರ ಜನ್ಮದಿನವಾದ ಗುರುವಾರ ಸಾಮೂಹಿಕ ಸೂರ್ಯ ನಮಸ್ಕಾರ ನಡೆಸುವ ಕಾರ್ಯಕ್ರಮವನ್ನು ರಾಜ್ಯದಲ್ಲಿ 2007ರಿಂದ ನಡೆಸುತ್ತಾ ಬರಲಾಗುತ್ತಿದ್ದು ಈ ಬಾರಿಯ ಕಾರ್ಯಕ್ರಮವನ್ನು ದಾಖಲೆ ಮಟ್ಟದಲ್ಲಿ ಯಶಸ್ವಿಗೊಳಿಸಲು ಶಾಲಾ ಶಿಕ್ಷಣ ಇಲಾಖೆ ವ್ಯಾಪಕ ವ್ಯವಸ್ಥೆ ಮಾಡಿತ್ತು.

ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಸುಮಾರು ಐವತ್ತು ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಇದೇ ಒಂದು ದಾಖಲೆಯಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವುದು ಕಡ್ಡಾಯವಾಗಿರಲಿಲ್ಲ. ಅಲ್ಲದೇ ಗಿನ್ನೆಸ್ ದಾಖಲಾತಿ ಮಾಡುವ ಸಲುವಾಗಿ ಸಂಘಟಿಸಿದ್ದೂ ಅಲ್ಲ ಎಂದು ಚೌಹಾಣ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಮಧ್ಯಪ್ರದೇಶ ಸರ್ಕಾರ ಹಮ್ಮಿಕೊಂಡಿದ್ದ ಸೂರ್ಯ ನಮಸ್ಕಾರ ಯೋಗ ಕಾರ್ಯಕ್ರಮವನ್ನು ಮುಸ್ಲಿಮ್ ಧರ್ಮಗುರುಗಳು ತೀವ್ರವಾಗಿ ಖಂಡಿಸಿ ಫತ್ವಾ ಹೊರಡಿಸಿದ್ದರು. ಅಷ್ಟೇ ಅಲ್ಲ ಕ್ರಿಶ್ಚಿಯನ್ ಸಮುದಾಯ ಕೂಡ ಸೂರ್ಯ ನಮಸ್ಕಾರ ಕಾರ್ಯಕ್ರಮದ ವಿರುದ್ಧ ಧ್ವನಿ ಎತ್ತಿತ್ತು. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕೂಡ ಈ ಕಾರ್ಯಕ್ರಮವನ್ನು ಆರ್ಎಸ್ಎಸ್ ನಾಯಕತ್ವವನ್ನು ಸಂತೃಪ್ತಿಪಡಿಸುವ ಪ್ರಯತ್ನ ಎಂಬುದಾಗಿ ಟೀಕಿಸಿತ್ತು.

Share this Story:

Follow Webdunia kannada