Select Your Language

Notifications

webdunia
webdunia
webdunia
webdunia

ನವರಾತ್ರಿ ಉತ್ಸವದಲ್ಲಿ ದೇವಿಯಾದಳು ಮುಸ್ಲಿಂ ಹುಡುಗಿ!

ನವರಾತ್ರಿ ಉತ್ಸವದಲ್ಲಿ ದೇವಿಯಾದಳು ಮುಸ್ಲಿಂ ಹುಡುಗಿ!
ಕತ್ರಾ , ಸೋಮವಾರ, 18 ಅಕ್ಟೋಬರ್ 2010 (09:10 IST)
PR
ಜಮ್ಮು-ಕಾಶ್ಮೀರದ ಜಗತ್ ಪ್ರಸಿದ್ಧ ಪುಣ್ಯಕ್ಷೇತ್ರ ವೈಷ್ಣೋ ದೇವಿ ದೇಗುಲದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನವರಾತ್ರಿ ಉತ್ಸವ ವೈಭವೋಪೇತವಾಗಿ ನಡೆದಿದೆ. ಇದು ಅಚ್ಚರಿಯ ವಿಚಾರವಲ್ಲ, ಈ ಬಾರಿ ಇಲ್ಲಿ ಮುಸ್ಲಿಂ ಬಾಲಕಿಯೊಬ್ಬಳು ದೇವಿಯಾಗಿ ಮೆರೆದು ಸರ್ವಧರ್ಮ ಸಮನ್ವಯತೆ ಮೆರೆದಿರುವುದೇ ಸುದ್ದಿ.

ಜಗತ್ತಿನ ಶ್ರೀಮಂತ ದೇವರು ಎಂಬ ಖ್ಯಾತಿ ತಿರುಪತಿ ತಿರುಮಲ ತಿಮ್ಮಪ್ಪನದ್ದು. ಭಾರತದಲ್ಲಿ ತಿರುಪತಿಯ ನಂತರ ಅತೀ ಹೆಚ್ಚು ಭಕ್ತರು ಭೇಟಿ ನೀಡುವ ದೇವಸ್ಥಾನ ಕಣಿವೆ ರಾಜ್ಯದ ವೈಷ್ಣೋ ದೇವಿ ದೇಗುಲ ಎನ್ನುವುದು ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ. ಇಂತಹ ಪವಿತ್ರ ಸ್ಥಳದಲ್ಲಿ ಮುಸ್ಲಿಮರು ಸಾಮರಸ್ಯದ ಹಾದಿ ತುಳಿದಿದ್ದಾರೆ.

ಆಕೆ 12ರ ಮಹಾಪರ ಮೊಘಲ್. ಚಿಕ್ಕಂದಿನಿಂದಲೇ ನವರಾತ್ರಿಯೆಂದರೆ ಸಂಭ್ರಮ ಪಡುತ್ತಿದ್ದ ಹುಡುಗಿ. ಈಗಷ್ಟೇ ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆಕೆಯ ಹೆತ್ತವರು ಕೂಡ ಇದಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆ.

ಮಾತಾ ವೈಷ್ಣೋ ದೇವಿ ಪುಣ್ಯಕ್ಷೇತ್ರವಿರುವ ಕತ್ರಾದಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಈಕೆಯೇ ಮುಂದೆ ಬಂದು ಬಣ್ಣ ಹಚ್ಚಿಕೊಂಡು, ದೇವಿಯಂತೆ ಮೆರೆದಿದ್ದಾಳೆ. ಈಕೆಯಂತೆ ಹಲವು ಮಂದಿ ತಮ್ಮ ಕಲಾ ಪ್ರಕಾರಗಳನ್ನು ಉತ್ಸವದಲ್ಲಿ ತೋರಿಸಿದ್ದಾರಾದರೂ, ಈಕೆಯಷ್ಟು ಗಮನ ಸೆಳೆಯಲು ವಿಫಲರಾಗಿದ್ದಾರೆ.

ಇಲ್ಲೇ ಉಪಹಾರ ಗೃಹವೊಂದನ್ನು ಇಟ್ಟುಕೊಂಡಿರುವ ಮೊಘಲ್ ತಂದೆ ಮೊಹಮ್ಮದ್ ಯೂಸುಫ್ ಮಗಳ ಬಯಕೆಗೆ ಪ್ರೋತ್ಸಾಹ ನೀಡುತ್ತಾ ಬಂದವರು. ಆರಂಭದಲ್ಲಿ ಮಗಳು ದೇವಿಯ ಉತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಎಂದಾಗ ಅಚ್ಚರಿ ಪಟ್ಟಿದ್ದರಾದರೂ, ನಂತರ ಬೆಂಬಲ ನೀಡಿದ್ದರು. ವಿಶೇಷವೆಂದರೆ ಬಾಲಕಿ ಮೊಘಲ್ ಉತ್ಸವದ ಒಂಬತ್ತೂ ದಿನ ಉಪವಾಸ ಆಚರಿಸಿದ್ದು.

ಕತ್ರಾದಲ್ಲಿ ನವರಾತ್ರಿಯ ಅಂಗವಾಗಿ ಅಕ್ಟೋಬರ್ 8ರಿಂದ 17ರವರೆಗೆ ಪ್ರತಿದಿನ ಉತ್ಸವ ಸಾಗಿತ್ತು. ಇದರಲ್ಲಿ ಸಾಕಷ್ಟು ಮುಸ್ಲಿಮರು ಭಾಗವಹಿಸಿದ್ದರು. ವಿವಿಧ ನೃತ್ಯಗಳು, ಹಾಡುಗಾರಿಕೆ, ಸಂಗೀತ ಕಾರ್ಯಕ್ರಮಗಳು ಹೀಗೆ ಒಂದನ್ನೊಂದು ಮೀರಿಸುವ ಕಾರ್ಯಕ್ರಮಗಳು ನಡೆದಿದ್ದವು.

ಇಲ್ಲಿ ಮುಸ್ಲಿಮರು ನವರಾತ್ರಿ ಉತ್ಸವದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. ಪ್ರತಿ ವರ್ಷವೂ ಪಾಕಿಸ್ತಾನದ ಕುಸ್ತಿ ಪಟುಗಳು ಇಲ್ಲಿ ಪಾಲ್ಗೊಂಡು ಜನಮನ ಸೂರೆಗೊಳ್ಳುತ್ತಾರೆ. ಮುಸ್ಲಿಂ ಸಂಗೀತಗಾರರು ದೇವಿಯ ಭಜನೆಯನ್ನು ಕರ್ಣಾನಂದವೆನಿಸುವಂತೆ ನುಡಿಸಿ-ಭಜಿಸುತ್ತಾರೆ.

ಬಾಲಕಿ ಮೊಘಲ್ ಇನ್ನು ಪ್ರತಿ ವರ್ಷವೂ ನವರಾತ್ರಿ ಉತ್ಸವದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾಳೆ. ನನ್ನ ಪ್ರಕಾರ ದೇವನೊಬ್ಬನೇ. ಆತನನ್ನು ವಿವಿಧ ಹೆಸರಿನಲ್ಲಿ ನಾವು ಪೂಜಿಸುತ್ತಿದ್ದೇವೆ ಎಂದು ಮುದ್ದು ಮುದ್ದಾಗಿ ಹೇಳಿ ನಗುತ್ತಾಳೆ.

ಇದಲ್ಲವೇ ಕೋಮು ಸೌಹಾರ್ದತೆಯೆಂದರೆ?

Share this Story:

Follow Webdunia kannada