Select Your Language

Notifications

webdunia
webdunia
webdunia
webdunia

ಜ್ಯೋತಿಷ್ಯ ಎನ್ನುವುದು ವಿಜ್ಞಾನ, ನಿಷೇಧ ಅಸಾಧ್ಯ: ಕೋರ್ಟ್

ಜ್ಯೋತಿಷ್ಯ ಎನ್ನುವುದು ವಿಜ್ಞಾನ, ನಿಷೇಧ ಅಸಾಧ್ಯ: ಕೋರ್ಟ್
ಮುಂಬೈ , ಶುಕ್ರವಾರ, 4 ಫೆಬ್ರವರಿ 2011 (10:58 IST)
ND
ಜ್ಯೋತಿಷ್ಯ, ವಾಸ್ತುಶಾಸ್ತ್ರ ಮುಂತಾದುವುಗಳ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಜಾಗೊಳಿಸಿರುವ ಬಾಂಬೆ ಹೈಕೋರ್ಟ್, 'ಜ್ಯೋತಿಷ್ಯ ಎನ್ನುವುದು ವಿಜ್ಞಾನದ ಒಂದು ಪ್ರಕಾರ' ಎಂದು ತೀರ್ಪು ನೀಡಿದೆ.

ಜ್ಯೋತಿಷ್ಯ ಮತ್ತು ಅದಕ್ಕೆ ಸಂಬಂಧಪಟ್ಟ ವಾಸ್ತುಶಾಸ್ತ್ರ, ರೇಖಿ, ಫೆಂಗ್ ಶುಯಿ, ಗಿಣಿಶಾಸ್ತ್ರ, ಅಂಗೈ ಭವಿಷ್ಯ, ರಾಶಿಫಲ ಮತ್ತು ರಾಶಿಚಕ್ರ ವಿದ್ಯೆಗಳಿಗೆ
ಸಂಬಂಧಪಟ್ಟ ಲೇಖನಗಳು, ಜಾಹೀರಾತುಗಳು, ಧಾರಾವಾಹಿಗಳ ಪ್ರಸಾರ-ಪ್ರಕಟಣೆ, ಅದನ್ನು ಅಭ್ಯಸಿಸುವುದು ಮತ್ತು ಪ್ರಚಾರ ಮಾಡುವುದರ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಜ್ಯೋತಿಷ್ಯ ಒಂದು ವಿಜ್ಞಾನವಲ್ಲ ಎಂದು ವಾದಿಸಿದ್ದ 'ಜನಹಿತ್ ಮಂಚ್' ಎಂಬ ಸರಕಾರೇತರ ಸಂಸ್ಥೆ, ಜ್ಯೋತಿಷಿಗಳು, ತಂತ್ರಿಗಳು, ವಾಸ್ತುಶಾಸ್ತ್ರಜ್ಞರನ್ನು 'ನಕಲಿ' ಎಂದು ಪ್ರತಿಪಾದಿಸಿತ್ತು. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತ್ತು. ಇದನ್ನು ವಜಾಗೊಳಿಸಿದ ನ್ಯಾಯಾಲಯ, ಜ್ಯೋತಿಷ್ಯ ಶಾಸ್ತ್ರ ಎನ್ನುವುದು ವಿಜ್ಞಾನ ಎಂದು ಘೋಷಿಸಿತು.

ಜ್ಯೋತಿಷ್ಯದ ಕುರಿತು ಸರ್ವೋಚ್ಚ ನ್ಯಾಯಾಲಯ ಈಗಾಗಲೇ ಗಮನ ಹರಿಸಿದೆ ಮತ್ತು ಜ್ಯೋತಿಷ್ಯ ಎನ್ನುವುದು ವಿಜ್ಞಾನ ಎಂದು ತೀರ್ಪು ನೀಡಿದೆ. ಶಾಲಾ ಪಠ್ಯಕ್ರಮಕ್ಕೆ ಜ್ಯೋತಿಷ್ಯ ಶಾಸ್ತ್ರವನ್ನು ಸೇರಿಸಬಹುದೇ ಎಂಬುದನ್ನು ಪರಿಗಣಿಸುವಂತೆ ವಿಶ್ವ ವಿದ್ಯಾಲಯಗಳಿಗೆ 2004ರಲ್ಲಿ ನ್ಯಾಯಾಲಯವು ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಈ ನ್ಯಾಯಾಲಯವು ಬದ್ಧವಾಗಿರುತ್ತದೆ ಎಂದು ಪಿಐಎಲ್ ಕುರಿತು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳು ತಿಳಿಸಿದರು.

ಕೇಂದ್ರ ಸರಕಾರವು ಈ ಸಂಬಂಧ ಸಲ್ಲಿಸಿದ ಅಫಿಡವಿತ್ ದಾಖಲೆಯನ್ನು ಕೂಡ ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಪರಿಗಣಿಸಿದರು.

ಜ್ಯೋತಿಷ್ಯ ಎನ್ನುವುದು 4,000 ವರ್ಷಗಳಷ್ಟು ಪುರಾತನವೆಂದು ನಂಬಲಾಗಿರುವ ವಿಜ್ಞಾನ. ಇದು 1954ರ ಮಾದಕ ದ್ರವ್ಯ ಮತ್ತು ಪವಾಡ ಚಿಕಿತ್ಸೆ (ಆಕ್ಷೇಪಕಾರಿ ಜಾಹೀರಾತುಗಳು) ಕಾಯ್ದೆಯ ಅಡಿಯಲ್ಲಿ ಬರುವ ವಿಚಾರವಲ್ಲ ಎಂದು ಕೇಂದ್ರವು ಅಫಿಡವಿತ್‌ನಲ್ಲಿ ಹೇಳಿತ್ತು.

'ಈ ಕಾಯ್ದೆಯಲ್ಲಿ ಜ್ಯೋತಿಷ್ಯ ಮತ್ತು ಸಂಬಂಧಿತ ವಿಜ್ಞಾನಗಳು ಬರುವುದಿಲ್ಲ. ಜ್ಯೋತಿಷ್ಯ ಎನ್ನುವುದು ನಂಬಲರ್ಹ ವಿಜ್ಞಾನ ಮತ್ತು ಅದನ್ನು 4,000ಕ್ಕೂ ಅಧಿಕ ವರ್ಷಗಳಿಂದ ಅನುಸರಿಸಿಕೊಂಡು ಬರಲಾಗಿದೆ' ಎಂದು ಪಶ್ಚಿಮ ವಲಯದ ಮಾದಕ ದ್ರವ್ಯ ಉಪ ನಿಯಂತ್ರಕ ಡಾ. ಆರ್. ರಾಮಕೃಷ್ಣ ಅವರು ಅಫಿಡವಿತ್ ಸಲ್ಲಿಸಿದರು.

'ಮೇಲೆ ಹೇಳಲಾಗಿರುವ ಕಾಯ್ದೆಯು ಡ್ರಗ್ಸ್ ಮತ್ತು ಕಣ್ಕಟ್ಟು ಪರಿಹಾರಗಳ ಕುರಿತ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಷೇಧಿಸಿರುವುದು ಆಗಿದೆ. ಈ ಕಾಯ್ದೆಯು ಜ್ಯೋತಿಷ್ಯಕ್ಕೆ ಸಂಬಂಧಪಟ್ಟ ಅಥವಾ ಇದೇ ವಿಜ್ಞಾನದ ಅಡಿಯಲ್ಲಿ ಬರುವ ಹಸ್ತ ಸಾಮುದ್ರಿಕಾಶಾಸ್ತ್ರ, ವಾಸ್ತುಶಾಸ್ತ್ರಗಳಿಗೆ ಅನ್ವಯಿಸುವುದಿಲ್ಲ. ಹಾಗಾಗಿ ಜ್ಯೋತಿಷ್ಯ ಅಥವಾ ಅದಕ್ಕೆ ಸಂಬಂಧ ಪಟ್ಟ ವಿಜ್ಞಾನವನ್ನು ಅಭ್ಯಾಸ ಮಾಡುವುದು ಅಥವಾ ಅನುಸರಿಸುವುದನ್ನು ನಿಷೇಧಿಸುವುದು ನ್ಯಾಯಯುತವಲ್ಲ' ಎಂದು ಅಫಿಡವಿತ್ ಹೇಳಿದೆ.

ಜನಹಿತ್ ಮಂಚ್, ಅದರ ಸಂಚಾಲಕ ಭಗವಾನ್‌ಜಿ ರೈಯಾನಿ ಮತ್ತು ಅವರ ಸಹಾಯಕ ದತ್ತರಾಮ್ ಕುಂಕರ್ ಅವರು, ಈ ಹಿಂದೆ ಹಲವು ಜ್ಯೋತಿಷಿಗಳು ಹೇಳಿದ ಭವಿಷ್ಯದ ಸತ್ಯಾಸತ್ಯತೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಮಾಜಿ ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿ ಮತ್ತು ಚರಣ್ ಸಿಂಗ್ ಮುಂತಾದವರ ವಿರುದ್ಧದ ಭವಿಷ್ಯವಾಣಿಗಳು ಸೇರಿದಂತೆ ಹಲವಾರು ಪ್ರಸಂಗಗಳನ್ನು 100ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು.

ಕೇಂದ್ರ ಸರಕಾರವನ್ನು ಪ್ರತಿನಿಧಿಸಿದ್ದ ವಕೀಲ ಅದ್ವೈತ್ ಸೇತ್ನಾ, ಜ್ಯೋತಿಷ್ಯ ಒಂದು ವಿಜ್ಞಾನ ಎಂಬುದನ್ನು ಸರ್ವೋಚ್ಚ ನ್ಯಾಯಾಲಯವು ಈ ಹಿಂದೆಯೇ ಒಪ್ಪಿಕೊಂಡಿತ್ತು ಮತ್ತು ಹಲವು ವಿಶ್ವ ವಿದ್ಯಾಲಯಗಳು ಇದನ್ನು ಒಂದು ವಿಷಯವನ್ನಾಗಿ ಪಠ್ಯಕ್ರಮಕ್ಕೆ ಸೇರಿಸಿವೆ ಎಂದರು. ಕೇಂದ್ರ ಸರಕಾರದ ವಕೀಲರ ನಿಲುವನ್ನು ಮಹಾರಾಷ್ಟ್ರ ಸರಕಾರದ ವಕೀಲ ಭರತ್ ಮೆಹ್ತಾ ಕೂಡ ಬೆಂಬಲಿಸಿದರು.

Share this Story:

Follow Webdunia kannada