Select Your Language

Notifications

webdunia
webdunia
webdunia
webdunia

ಚುನಾವಣೆ:ಮೋದಿ, ಶ್ವೇತಾ ಭಟ್ ಭವಿಷ್ಯ ಇಂದು ನಿರ್ಧಾರ

ಚುನಾವಣೆ:ಮೋದಿ, ಶ್ವೇತಾ ಭಟ್ ಭವಿಷ್ಯ ಇಂದು ನಿರ್ಧಾರ
ಅಹಮದಾಬಾದ್‌ , ಸೋಮವಾರ, 17 ಡಿಸೆಂಬರ್ 2012 (12:06 IST)
PTI
ಭಾರಿ ಘಟಾನುಘಟಿಗಳೇ ಸ್ಪರ್ಧಿಸಿರುವ ಗುಜರಾತ್‌ ವಿಧಾನಸಭೆಯ ಎರಡನೇ ಮತ್ತು ಕೊನೆಯ ಹಂತದ ಮತದಾನ ಇಂದು ಆರಂಭವಾಗಿದ್ದು, ಶಾಂತಿಯುತ ಮತದಾನ ನಡೆದಿದೆ ಎಂದು ಮೂಲಗಳು ತಿಳಿಸಿವೆ.

12 ಜಿಲ್ಲೆಗಳ 95 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಜರುಗಲಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿ, ಅವರ ವಿರುದ್ಧ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿರುವ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಪತ್ನಿ ಶ್ವೇತಾ ಭಟ್‌, ಮೋದಿ ಅವರ ಪರಮಾಪ್ತ ಮಾಜಿ ಸಚಿವ ಅಮಿತ್‌ ಶಾ, ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ಮುಖಂಡ ಶಂಕರ್‌ ಸಿಂಗ್‌ ವಘೇಲಾ, ಮೋದಿ ವಿರೋಧಿ ದಿವಂಗತ ಸಚಿವ ಹರೇನ್‌ ಪಾಂಡ್ಯರ ಪತ್ನಿ ಜಾಗೃತಿ ಪಾಂಡ್ಯ ಸೇರಿದಂತೆ ಹಲವ‌ರ ಭವಿಷ್ಯ ನಿರ್ಧಾರವಾಗಲಿದೆ.

ಎಲ್ಲ 95 ಕ್ಷೇತ್ರಗಳಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ 92 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಮೂರು ಕ್ಷೇತ್ರಗಳಲ್ಲಿ ಎನ್‌ಸಿಪಿ ಜತೆ ಹೊಂದಾಣಿಕೆ ಮಾಡಿಕೊಂಡಿದೆ.

ಇದೇ ಪ್ರಥಮ ಬಾರಿಗೆ ಚುನಾವಣೆ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‌ ನೇತೃತ್ವದ ಗುಜರಾತ್‌ ಪರಿವರ್ತನ ಪಕ್ಷ ಮತ್ತು ಬಿಎಸ್‌ಪಿ ಅಭ್ಯರ್ಥಿಗಳು 84 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ.

ಒಟ್ಟು 23,318 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳಲ್ಲಿ 14 ಸಾವಿರ ಮತಗಟ್ಟೆ ಕೇಂದ್ರಗಳು ಸೂಕ್ಷ್ಮಮತಗಟ್ಟೆಗಳು ಎಂದು ಗುರುತಿಸಲ್ಪಟ್ಟಿದೆ. 1.98 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಮತಏಣಿಕೆ ಕಾರ್ಯ ಡಿಸೆಂಬರ್‌ 20ರಂದು ನಡೆಯಲಿದೆ. 182 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 87 ಕ್ಷೇತ್ರಗಳಿಗೆ ಮತದಾನ ಡಿ.13ರಂದು ನಡೆದಿತ್ತು.

Share this Story:

Follow Webdunia kannada