Select Your Language

Notifications

webdunia
webdunia
webdunia
webdunia

ಚಿತ್ರಕೂಟ: ಮನೆಯಲ್ಲಿ ಅವಿತಿದ್ದ ಡಕಾಯಿತ ಪೊಲೀಸರ ಗುಂಡಿಗೆ ಬಲಿ

ಚಿತ್ರಕೂಟ: ಮನೆಯಲ್ಲಿ ಅವಿತಿದ್ದ ಡಕಾಯಿತ ಪೊಲೀಸರ ಗುಂಡಿಗೆ ಬಲಿ
ಚಿತ್ರಕೂಟ(ಉತ್ತರ ಪ್ರದೇಶ) , ಗುರುವಾರ, 18 ಜೂನ್ 2009 (15:07 IST)
ಕಳೆದ ಮಂಗಳವಾರದಿಂದ ಚಿತ್ರಕೂಟ ಜಿಲ್ಲೆಯ ಮನೆಯೊಂದರಲ್ಲಿ ಅವಿತು ಕುಳಿತಿದ್ದು, ಪೊಲೀಸರೊಂದಿಗೆ ಸುಮಾರು 48 ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಸಿದ್ದ ಡಕಾಯಿತನನ್ನು ಕೊನೆಗೂ ಪೊಲೀಸರು ಹೊಡೆದುರುಳಿಸಿದ್ದಾರೆ. ಈತ ತಪ್ಪಿಸಿಕೊಂಡಿದ್ದಾನೆ ಎಂಬುದಾಗಿ ಕೆಲವೇ ಗಂಟೆಗಳ ಹಿಂದೆ ವರದಿಯಾಗಿತ್ತು. ಉತ್ತರ ಪ್ರದೇಶದ ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು 400 ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಘನಶ್ಯಾಮ ನಿಶಾದ್ ಅಲಿಯಾಸ್ ನನ್ನು ಎಂಬ ಡಯಾಯಿತ ನಾಲ್ವರು ಪೊಲೀಸರನ್ನು ಗುಂಡಿಕ್ಕಿ ಕೊಂದಿದ್ದಾನೆ. ಇದಲ್ಲದೆ, ಐಜಿಪಿ ವಿ.ಕೆ. ಗುಪ್ತ, ಡಿಐಜಿ ಎಸ್.ಕೆ. ಸಿಂಗ್ ಹಾಗೂ ಅಲಹಾಬಾದ್ ವಿಶೇಷ ಕಾರ್ಯಪಡೆಯ ಮುಖ್ಯಸ್ಥ ನವೇಂದು ಸಿಂಗ್ ಅವರು ಗಾಯಗೊಂಡಿದ್ದಾರೆ.

ಸುಮಾರು 40 ಮನೆಗಳನ್ನು ಹೊಂದಿರುವ ಜಾಮೌಲಿ ಗ್ರಾಮದಲ್ಲಿ ಘನಶ್ಯಾಮ ಅಡಗಿಕೊಂಡಿದ್ದ. ಅಲ್ಲಿನ ಮನೆಗಳವರನ್ನು ತೆರವು ಗೊಳಿಸಿರುವ ಪೊಲೀಸರು ಮನೆಗಳಿಗೆ ಬೆಂಕಿ ಹಚ್ಚಿ ಡಕಾಯಿತನನ್ನು ಉಸಿರುಗಟ್ಟಲು ಯತ್ನಿಸಿದ್ದರು. ಆದರೆ ಆತ ಅಡಗಿದ್ದ ಮನೆಯ ಸಮೀಪ ತೆರಳಲು ಪೊಲೀಸರು ಯತ್ನಿಸಿದ ವೇಳೆ ಘನಶ್ಯಾಮ ಅವರ ಮೇಲೆ ಗುಂಡೆಸೆಯುತ್ತಿದ್ದ.

ಪೊಲೀಸರ ಮೇಲೆ ಗುಂಡೆಸೆತ ನಡೆದ ಬಳಿಕ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದ್ದ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಡಿಜಿಪಿ ಬ್ರಿಜ್‌ಲಾಲ್ ಅವರು ಬುಧವಾರ ಸಾಯಂಕಾಲ ಅಂತಿಮ ದಾಳಿಗಾಗಿ ಪಡೆಗಳನ್ನು ನಿಯೋಜಿಸಿದ್ದರು. ಆದರೆ, ಕತ್ತಲಾವರಿಸುತ್ತಿರುವಂತೆ ಸೂಕ್ತವಾದ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು. ಕಳೆದ ಮಂಗಳವಾರದಿಂದ ಕಾರ್ಯಾಚರಣೆ ನಡೆಸಲಾಗಿತ್ತು.

"ನಸುಕಿಗೂ ಮುಂಚಿನ ಅವಧಿಯಲ್ಲಿ ಡಕಾಯಿತ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಯದ್ವಾತದ್ವಾ ಗುಂಡು ಹಾರಿಸಿದ್ದ. ಪೊಲೀಸರು ಇಡೀ ಗ್ರಾಮವನ್ನು ಸುತ್ತುವರಿದಿದ್ದ, ನಾವು ಪ್ರತಿಯಾಗಿ ಗುಂಡು ಹಾರಿಸಿದ ಕಾರಣ ಆತನ ಪರಾರಿ ಪ್ರಯತ್ನ ವಿಫಲವಾಗಿದ್ದು ಆತ ಮತ್ತೆ ಮನೆಯಲ್ಲಿ ಅವಿತುಕೊಂಡಿದ್ದಾನೆ" ಎಂದು ಅವರು ಗುರುವಾರ ಬೆಳಿಗ್ಗೆ ಹೇಳಿದ್ದರು.

ಬುಲೆಟ್ ಪ್ರೂಫ್ ವಾಹನಗಳಲ್ಲಿ ಗ್ರಾಮದೊಳಕ್ಕೆ ನುಗ್ಗಿ ಹುಡುಕಾಟ ನಡೆಸಲು ಮತ್ತು ಆತ ಅವಿತುಕೊಂಡಿದ್ದಾನೆ ಎಂದು ಶಂಕಿಸಲಾಗಿರುವ ಮನೆಯನ್ನು ಬುಲ್ಡೋಜರ್‌ನಲ್ಲಿ ಕೆಡವಲು ಯೋಜಿಸಿರುವುದಾಗಿ ಬ್ರಿಜ್‌ಲಾಲ್ ಹೇಳಿದ್ದರು.

ಡಕಾಯಿತ ನಮ್ಮ ಪೊಲೀಸರನ್ನು ಕೊಂದಿದ್ದು ಆತನನ್ನು ಬಿಟ್ಟುಬಿಡುವ ಪ್ರಶ್ನೆಯೇ ಇಲ್ಲ. ಅತನನ್ನು ಮಟ್ಟಹಾಕಿಯೇ ಸಿದ್ಧ ಎಂದು ಪೊಲೀಸರು ಪಣತೊಟ್ಟಿದ್ದರು.

Share this Story:

Follow Webdunia kannada