Select Your Language

Notifications

webdunia
webdunia
webdunia
webdunia

ಕೇಂದ್ರ ಸಂಪುಟ ಪುನಾರಚನೆ ಠುಸ್ಸ್ ಎಂದ ಬಿಜೆಪಿ

ಕೇಂದ್ರ ಸಂಪುಟ ಪುನಾರಚನೆ ಠುಸ್ಸ್ ಎಂದ ಬಿಜೆಪಿ
ನವದೆಹಲಿ , ಮಂಗಳವಾರ, 12 ಜುಲೈ 2011 (17:27 IST)
ಕೇಂದ್ರ ಸಂಪುಟ ಪುನಾರಚನೆಯನ್ನು "ಠುಸ್ ಪಟಾಕಿ" ಎಂದು ಕರೆದಿರುವ ಬಿಜೆಪಿ, ಯುಪಿಎ ಸರಕಾರವನ್ನು ಆವರಿಸಿರುವ ಕಾರ್ಮೋಡವನ್ನು ಹೋಗಲಾಡಿಸಲು ಮತ್ತು ದೇಶದ ಜನತೆಗೆ ಭರವಸೆ ನೀಡಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವಿಫಲವಾಗಿದ್ದಾರೆ ಎಂದು ಟೀಕಿಸಿದೆ.

ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಸಂಪುಟ ಪುನಾರಚನೆಯು ಠುಸ್ ಆಗಿದೆ. ಇದು ನಿಷ್ಪ್ರಯೋಜಕ ಚಟುವಟಿಕೆಯಾಯಿತು ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದರು.

ಐವರು ಸಚಿವರನ್ನು ಕೈಬಿಟ್ಟು 13 ಹೊಸ ಮುಖಗಳನ್ನು ಸೇರಿಸಿಕೊಂಡು ಮನಮೋಹನ್ ಸಿಂಗ್ ಅವರು ತಮ್ಮ ಸಚಿವ ಸಂಪುಟವನ್ನು ಮಂಗಳವಾರ ಪುನಾರಚನೆ ಮಾಡಿದ್ದರು. ಆದರೆ, 2ಜಿ ಹಗರಣಗಳ ಕರಿಛಾಯೆಯಿರುವ ಗೃಹ ಸಚಿವ ಪಿ.ಚಿದಂಬರಂ ಹಾಗೂ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಬಿಜೆಪಿಯ ಆಗ್ರಹಕ್ಕೆ ಪ್ರಧಾನಿ ಸೊಪ್ಪು ಹಾಕಿರಲಿಲ್ಲ.

ಇದೊಂದು ವ್ಯರ್ಥ ಪ್ರಯತ್ನ. ಮುಳುಗುತ್ತಿರುವ ಮತ್ತು ಕಾರ್ಯಸ್ಥಗಿತ ಮಾಡಿರುವ ಸರಕಾರವಿದು ಎಂಬುದು ನಮಗೆ ಮನದಟ್ಟಾಗಿದೆ. ಪ್ರಧಾನಿಯವರು ದೇಶದ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ಮತ್ತೆ ವಿಫಲರಾಗಿದ್ದಾರೆ ಎಂದು ರೂಡಿ ಆರೋಪಿಸಿದರು.

ಭ್ರಷ್ಟಾಚಾರ, ಬೆಲೆ ಏರಿಕೆ ಮತ್ತು ಕೆಟ್ಟ ಆಡಳಿತದ ಕುರಿತಾಗಿ ಬಿಜೆಪಿಯು ಕಳೆದ ಹಲವಾರು ತಿಂಗಳಿಂದ ಯುಪಿಎ ಸರಕಾರವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಲೇ ಇತ್ತು.

ಒಳ್ಳೆಯ ಕೆಲಸ ಮಾಡಿದ್ದಕ್ಕೆ ಜೈರಾಂಗೆ ಶಿಕ್ಷೆ: ಸಿಪಿಐ
ಈ ಮಧ್ಯೆ, ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿರುವ ಸಿಪಿಐ ನಾಯಕ ಗುರುದಾಸ ದಾಸಗುಪ್ತಾ, ಇದೊಂದು ಮಾಮೂಲಿ ವಾರ್ಷಿಕ ವಿಧಿಯಾಗಿಬಿಟ್ಟಿದೆ. ಸರಕಾರವು ಏನೋ ಬದಲಾಗುತ್ತಿದೆ, ಹಿಂದಿಗಿಂತ ಚೆನ್ನಾಗಿ ಆಡಳಿತ ಕೊಡುತ್ತೇವೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವ ವ್ಯರ್ಥ ಪ್ರಯತ್ನವಿದು. ಇದು ಹೊಸ ಬಾಟಲಿಯಲ್ಲಿ ಹಳೇ ಮದ್ಯ ಎಂದು ಹೇಳಿದರು.

ಜೈರಾಂ ರಮೇಶ್ ಅವರನ್ನು ಪರಿಸರ ಖಾತೆಯಿಂದ ತೆಗೆದು ಹಾಕಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಪರಿಸರ ನೀತಿ ಉಲ್ಲಂಘಿಸಿ ಕೈಗಾರಿಕೆ ಸ್ಥಾಪಿಸುವ ಕಾರ್ಪೊರೇಟ್ ಜಗತ್ತಿನ ಹುನ್ನಾರಗಳನ್ನು ಅವರು ತಡೆದಿರುವುದಕ್ಕಾಗಿಯೇ ಅವರಿಗೆ ಶಿಕ್ಷೆ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.


Share this Story:

Follow Webdunia kannada