Select Your Language

Notifications

webdunia
webdunia
webdunia
webdunia

ಐದು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು

ಐದು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು
ನವದೆಹಲಿ , ಬುಧವಾರ, 11 ಡಿಸೆಂಬರ್ 2013 (14:46 IST)
PR
ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಯತ್ನದಲ್ಲೇ ಅಭೂತಪೂರ್ವ ಸಾಧನೆ ಮಾಡಿರುವ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷವು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಗುಜರಾತ್‌ ಸೇರಿದಂತೆ ದೇಶದ ವಿವಿಧೆಡೆ ಸ್ಪರ್ಧೆ ನಡೆಸಲು ತಯಾರಿ ನಡೆಸಿದೆ.

ಈಗಾಗಲೇ ಕರ್ನಾಟಕದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸದ್ದಿಲ್ಲದೇ ತಯಾರಿ ನಡೆಸಿರುವ ಆಮ್‌ ಆದ್ಮಿ, ಗುಜರಾತ್‌, ಹರ್ಯಾಣ, ಮಹಾರಾಷ್ಟ್ರದಲ್ಲೂ ಚುನಾವಣಾ ಪೂರ್ವತಯಾರಿ ಆರಂಭಿಸಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಗುಜರಾತಲ್ಲಿ 309 ಘಟಕ:

ನರೇಂದ್ರ ಮೋದಿಗೆ ಕಡಿವಾಣ ಹಾಕಲು ಆಮ್‌ ಆದ್ಮಿ ಪಕ್ಷವು ಗುಜರಾತ್‌ನ ವಿವಿಧ ಜಿಲ್ಲೆಗಳಲ್ಲಿ 309 ಸಮಿತಿಗಳನ್ನು ಹುಟ್ಟುಹಾಕಿದೆ. ಈ ಮೂಲಕ 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗಿಳಿದು ಮೋದಿಗೆ ತವರಿನಲ್ಲೇ ಬಿಸಿ ಮುಟ್ಟಿಸುವ ತಂತ್ರವನ್ನು ಪಕ್ಷ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.

ಹರ್ಯಾಣದಲ್ಲಿ ಖೇಮ್ಕಾ ಸೆಳೆತ?:

ಹರ್ಯಾಣದಲ್ಲಿ ಮುಂದಿನ ವರ್ಷ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೂ ಪಕ್ಷ ವೇದಿಕೆ ಸಜ್ಜುಗೊಳಿಸುತ್ತಿದೆ. ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೆಂಬ ಬಗ್ಗೆ ಇನ್ನಷ್ಟೇ ನಿರ್ಧಾರ ಆಗಬೇಕಿದೆ. ಆದರೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ನಡೆಸಿರುವರು ಎನ್ನಲಾದ ಭೂಹಗರಣಗಳನ್ನು ಬಯಲಿಗೆಳೆದಿರುವ ಐಎಎಸ್‌ ಅಧಿಕಾರಿ ಅಶೋಕ ಖೇಮ್ಕಾ ಅವರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಪಕ್ಷ ಚಿಂತನೆ ನಡೆಸಿದೆ ಎಂದು ಮುಖಂಡರೊಬ್ಬರು ಹೇಳಿದ್ದಾರೆ.

ಮುಂಬೈನಲ್ಲಿ...:

ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮುಂಬೈನ ಎಲ್ಲ 36 ವಿಧಾನಸಭಾ ಸ್ಥಾನಗಳಿಂದ ಆಮ್‌ ಆದ್ಮಿ ಪಕ್ಷ ಕಣಕ್ಕಿಳಿಯಲಿದೆ. ಆದರೆ ಎಷ್ಟು ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸಬೇಕೆಂಬ ಬಗ್ಗೆ ಇನ್ನೂ ನಿರ್ಣಯವಾಗಿಲ್ಲ ಎಂದು ಪಕ್ಷದ ಮುಖಂಡ ಮಾಯಾಂಕ ಗಾಂಧಿ ಹೇಳಿದ್ದಾರೆ.

ಈಗಾಗಲೇ ಕಾಂಗ್ರೆಸ್‌-ಎನ್‌ಸಿಪಿ, ಬಿಜೆಪಿ-ಶಿವಸೇನೆ ಜನಪ್ರತಿನಿಧಿಗಳು ನಡೆಸಿರುವರು ಎನ್ನಲಾದ ಅಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹವನ್ನು ಆಮ್‌ ಆದ್ಮಿ ಕಾರ್ಯಕರ್ತರು ಆರಂಭಿಸಿ, ಮುಂದಿನ ದಿನಗಳಲ್ಲಿ ಬಹಿರಂಗಗೊಳಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಉ.ಪ್ರ.ದಲ್ಲಿ:

ದಿಲ್ಲಿಗೆ ಹೊಂದಿಕೊಂಡಿರುವ ಉತ್ತರಪ್ರದೇಶ ಮತ್ತು ಹರ್ಯಾಣದ ಭಾಗಗಳಾದ ಘಾಜಿಯಾಬಾದ್‌, ನೊಯ್ಡಾ, ಗುರಗಾಂವ್‌, ಫ‌ರೀದಾಬಾದ್‌, ಮೇರ…ನಲ್ಲಿ ಕೂಡ ಆಮ್‌ ಆದ್ಮಿ ಪಕ್ಷ ಸ್ಪರ್ಧೆಗಿಳಿಯಲಿದೆ ಎಂದು ಪಕ್ಷದ ಮುಖಂಡ ಮನೀಶ ಸಿಸೋಡಿಯಾ ಹೇಳಿದ್ದಾರೆ.

Share this Story:

Follow Webdunia kannada