Select Your Language

Notifications

webdunia
webdunia
webdunia
webdunia

ಈ ವರ್ಷದ ನ್ಯೂಸ್ ಮೇಕರ್ ರಾಹುಲ್ ಗಾಂಧಿ

ಈ ವರ್ಷದ ನ್ಯೂಸ್ ಮೇಕರ್ ರಾಹುಲ್ ಗಾಂಧಿ
ನವದೆಹಲಿ , ಬುಧವಾರ, 2 ಡಿಸೆಂಬರ್ 2009 (11:28 IST)
PTI
ಸ್ವಯಂವರ ಖ್ಯಾತಿಯ ರಾಖಿ ಸಾವಂತ್, ನಂ ವನ್ ನಟಿ ಕತ್ರಿನಾ ಕೈಫ್ ಅವರನ್ನೆಲ್ಲಾ ಹಿಂದಿಕ್ಕಿರುವ ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ ಈ ವರ್ಷ ಸುದ್ದಿಮಾಡಿದ ವ್ಯಕ್ತಿಗಳ ಪಟ್ಟಿಯಲ್ಲಿ ನಂ ವನ್ ಸ್ಥಾನ ಪಡೆದಿದ್ದಾರೆ.

ಮುಂಚೂಣಿಯಲ್ಲಿರುವ ಆನ್‌ಲೈನ್ ವೆಬ್‌ಸೈಟ್ ಯೂಹೂ ಇಂಡಿಯಾ ಪ್ರಕಾರ 2009ರಲ್ಲಿ ಸುದ್ದಿಮಾಡಿದವರ ಪ್ರಕಾರ ರಾಹುಲ್ ಗಾಂಧಿ ಪ್ರಥಮ ಸ್ಥಾನದಲ್ಲಿದ್ದಾರೆ. ಇವರ ನಂತರದಲ್ಲಿ ಕ್ರಿಕೆಟರ್‌ಗಳು ಮತ್ತು ಬಾಲಿವುಡ್ ಮಂದಿ ಇದ್ದಾರೆ.

"ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರುಜೀವ ನೀಡಿದ್ದು ಸೇರಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಕುರಿತು ಕೆಲವು ಪ್ರಮುಖ ಸುದ್ದಿಗಳು ರಾಹುಲ್ ಅವರನ್ನು ಮೊದಲ ಸ್ಥಾನಕ್ಕೇರಿಸಿವೆ. ಕಾಂಗ್ರೆಸ್ ಪಕ್ಷದ ಯುವ ಮುಖವಾಗಿ ಕಂಡುಕೊಂಡದ್ದು, ಮನಮೋಹನ್ ಸಿಂಗ್ ಅವರು ಮತ್ತೆ ಪ್ರಧಾನಿಯಾಗುವಂತೆ ಶ್ರಮವಹಿಸಿದ್ದು, ಹಾಗೂ ಸಂಪುಟದಲ್ಲಿ ಸ್ಥಾನ ನಿರಾಕರಿಸಿದ್ದು ಇವುಗಳೆಲ್ಲ ರಾಹುಲ್ ಅವರ ಇಮೇಜ್ ಹೆಚ್ಚಿಸಿವೆ" ಎಂಬುದಾಗಿ ಯಾಹೂ ಹೇಳಿದೆ.

ರಾಹುಲ್ ನಂತರದ ಸ್ಥಾನ ಬಾಲಿವುಡ್ ನಟಿ ಕತ್ರಿನಾ ಕೈಫ್‌ಗೆ. ತನ್ನ ಸಿನಿಮಾಗಳು ಹಾಗೂ ವೈಯಕ್ತಿಕ ಜೀವನದಿಂದ ಸದಾ ಸುದ್ದಿಯಲ್ಲಿದ್ದ ಕತ್ರಿನಾಗೆ ದ್ವಿತೀಯ ಸ್ಥಾನವಾದರೆ, ಸ್ವಯಂವರ ಖ್ಯಾತಿಯ ರಾಖಿ ಸಾವಂತ್‌ಗೆ ಐದನೆ ಸ್ಥಾನ. ರಾಖಿಯನ್ನು ಐಪಿಎಲ್ ಖ್ಯಾತಿಯ ಲಲಿತ್ ಮೋದಿ ಹಾಗೂ ಆಸ್ಕರ್ ಖ್ಯಾತಿಯ ಸಂಗೀತ ನೀರ್ದೇಶಕ ಎ.ಆರ್. ರೆಹಮಾನ್ ಹಿಂದಿಕ್ಕಿದ್ದಾರೆ.

ಸುದ್ದಿಗಳಿಗೆ ಓದುಗರು ಭೇಟಿ ನೀಡಿರುವ ಕ್ಲಿಕ್‌ಗಳ ಆಧಾರಲ್ಲಿ ಯಾಹೂ ಸಂಪಾದಕೀಯ ಮಂಡಳಿ ಈ ಪಟ್ಟಿ ಸಿದ್ಧಪಡಿಸಿದೆ.

ಘಟನೆಗಳ ಆಧಾರಿತವಾಗಿ ಹೇಳುವುದಾದರೆ, ಸಲಿಂಗ ರತಿ ಹಕ್ಕಿನ ಕುರಿತು ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ಸುದ್ದಿ, ಮುಂಬೈ ಸಮುದ್ರ ಸೇತುವೆ ಹಾಗೂ ಹಂದಿ ಜ್ವರ ಸುದ್ದಿಗಳಿಗೆ ಅತಿ ಹೆಚ್ಚು ಕ್ಲಿಕ್‌ಗಳು ದಾಖಲಾಗಿವೆ.

ಅಂತಿಮ ವಿದಾಯವರ್ಗದ ಸುದ್ದಿಗಳಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿಯವರ ದುರಂತ ಅಂತ್ಯ, ಮಹಾರಾಣಿ ಗಾಯತ್ರಿ ದೇವಿ, ಪಾಪ್ ತಾರೆ ಮೈಖೆಲ್ ಜಾಕ್ಸನ್, ಬ್ರಿಟಿಷ್ ರಿಯಾಲಿಟಿ ತಾರೆ ಜೇಡ್ ಗೂಡಿ ಹಾಗೂ ಅಂಪೈರ್ ಡೇವಿಡ್ ಶೆಪರ್ಡ್ ಅವರುಗಳ ಸಾವಿನ ಸುದ್ದಿಯನ್ನು ಅತಿ ಹೆಚ್ಚು ಮಂದಿ ಓದಿದ್ದಾರೆ.

Share this Story:

Follow Webdunia kannada