Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಕ್ಷದಲ್ಲಿ ಮಹಿಳಾ ಮೀಸಲಾತಿ ಹೆಚ್ಚಳ: ರಾಹುಲ್

ಕಾಂಗ್ರೆಸ್ ಪಕ್ಷದಲ್ಲಿ ಮಹಿಳಾ ಮೀಸಲಾತಿ ಹೆಚ್ಚಳ: ರಾಹುಲ್
ನವದೆಹಲಿ , ಭಾನುವಾರ, 30 ಜೂನ್ 2013 (10:53 IST)
PTI
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಎಐಸಿಸಿ ಮತ್ತು ಪಕ್ಷದ ಇತರ ಘಟಕಗಳಲ್ಲಿ ಮಹಿಳೆಯರಿಗೆ ಶೇ. 50 ಪ್ರಾತಿನಿಧ್ಯ ಖಾತರಿಪಡಿಸುವುದಾಗಿ ಪ್ರತಿಜ್ಞೆಗೈದಿದ್ದಾರೆ.

ಪಕ್ಷದ ನೂತನ ಪದಾಧಿಕಾರಿಗಳೊಂದಿಗೆ ಪ್ರಥಮ ವಿಧ್ಯುಕ್ತ ಸಭೆ ನಡೆಸಿದ ಅವರು ಮಹಿಳೆಯರಿಗೆ ಎಐಸಿಸಿಯಲ್ಲಿ ಹೇಗೆ ಶೇ. 50 ಪ್ರಾತಿನಿಧ್ಯ ಕಲ್ಪಿಸಬಹುದೆಂಬ ಬಗ್ಗೆ ಮಾತನಾಡಿದರು. ಇದು ಮೀಸಲಾತಿ ಪ್ರಶ್ನೆಯಲ್ಲ, ಬದಲು ಪ್ರಾತಿನಿಧ್ಯದ ಪ್ರಶ್ನೆಯಾಗಿದೆ. ಮುಂದಿನ 2-3 ವರ್ಷಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಖಂಡಿತ ಶೇ. 50ಕ್ಕೆ ಹೆಚ್ಚಿಸಲಾಗುವುದೆಂದು ರಾಹುಲ್‌ ಹೇಳಿದರೆಂದು ಪಕ್ಷದ ವಕ್ತಾರ ಭಕ್ತ ಚರಣ್‌ದಾಸ್‌ ತಿಳಿಸಿದರು.

ಈಗ 12 ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಅಂಬಿಕಾ ಸೋನಿ ಮಾತ್ರ ಏಕೈಕ ಮಹಿಳೆಯಾಗಿದ್ದಾರೆ. ಅಂತೆಯೇ 44 ಕಾರ್ಯದರ್ಶಿಗಳಲ್ಲಿ ಕೇವಲ ಐವರು ಮಹಿಳೆಯರಿದ್ದಾರೆ.

ರಾಹುಲ್‌ 2014ನೇ ಚುನಾವಣೆಗೆ ರಚಿಸಿರುವ ತಂಡ ಯುವಕರಿಂದ ತುಂಬಿದ್ದು ಪದಾಧಿಕಾರಿಗಳ ಸರಾಸರಿ ವಯಸ್ಸು 52 ಆಗಿದೆ. ಹೊಣೆಗಾರಿಕೆ ಪಡೆದವರನ್ನು ಉತ್ತರದಾಯಿಗಳನ್ನಾಗಿಯೂ ಮಾಡಲಾಗುವುದು ಎಂದು ಪದಾಧಿಕಾರಿಗಳಿಗೆ, ವಿಶೇಷವಾಗಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ರಾಹುಲ್‌ ಎಚ್ಚರಿಕೆ ನೀಡಿದರಲ್ಲದೆ ಯುವಕರು ಹಿರಿಯರನ್ನು ಗೌರವಿಸಿ ಅವರ ಅನುಭವದ ನೆರವು ಪಡೆದು ಮುಂದುವರಿಯಬೇಕೆಂದು ಕಿವಿಮಾತು ಹೇಳಿದರು.

ಎರಡು ತಾಸಿಗಿಂತ ಹೆಚ್ಚು ಹೊತ್ತು ನಡೆದ ಸಭೆಯಲ್ಲಿ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯಲಿಲ್ಲ. ಹೊಸಬರು ತಮ್ಮಲ್ಲಿ ವಿಶ್ವಾಸವಿರಿಸಿ ಹೊಣೆಗಾರಿಕೆಗಳನ್ನು ನೀಡಿದ್ದಕ್ಕಾಗಿ ರಾಹುಲ್‌ಗೆ ಕೃತಜ್ಞತೆ ಸಲ್ಲಿಸಿದರು. ದಿಲ್ಲಿ, ಮಧ್ಯಪ್ರದೇಶ,ರಾಜಸ್ಥಾನ ಮತ್ತು ಛತ್ತೀಸ್‌ಗಢ, ಈ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಸಕ್ತ ವರ್ಷವೇ ನಡೆಯಲಿರುವುದರಿಂದ ಈ ಸಭೆ ಮಹತ್ವ ಪಡೆಯುತ್ತದೆ.

Share this Story:

Follow Webdunia kannada