Select Your Language

Notifications

webdunia
webdunia
webdunia
webdunia

ಅನುಭವ ಜೋಳಿಗೆ ತುಂಬುತ್ತಾ ಹೊಸ ಪಯಣದತ್ತ...

ಅನುಭವ ಜೋಳಿಗೆ ತುಂಬುತ್ತಾ ಹೊಸ ಪಯಣದತ್ತ...
ರಶ್ಮಿ ಪೈ
PTI
ಹೊಸ ವರ್ಷವನ್ನು ಸ್ವಾಗತಿಸಲು ಹೊಸ್ತಿಲಲ್ಲಿ ನಿಂತಿರುವ ಈ ಶುಭ ಗಳಿಗೆಯಲ್ಲಿ ಕಳೆದು ಹೋದಂತಹ ವರುಷವನ್ನೊಮ್ಮೆ ಮೆಲುಕು ಹಾಕಿದರೆ ನನ್ನ ಜೀವನದಲ್ಲಿನ ಸಿಹಿ-ಕಹಿಯ ನೆನಪುಗಳ ತೆರೆದ ಪುಟಗಳು ಮನಸ್ಸಿನಲ್ಲಿ ಹಾದುಹೋಗುತ್ತವೆ. ಅಬ್ಬಾ! ಆ ವರುಷ ಇಷ್ಟು ಬೇಗನೆ ಕಳೆದು ಹೋಯಿತಲ್ಲಾ.. ಎಂದು ನಿಟ್ಟುಸಿರು ಬಿಡುವಾಗ, ಸಂದ ವರುಷದಲ್ಲಿ ನಾನೇನು ಮಾಡಿದೆ?, ಗಳಿಸಿದೆ?, ಅನುಭವಿಸಿದೆ, ಹೀಗೆ ಅನೇಕ ವಿಷಯಗಳೊಂದಿಗೆ ನನ್ನ ಏಳು ಬೀಳುಗಳ ನೆನಪುಗಳು ನನ್ನ ಮನಪಟಲದಲ್ಲಿ ಚಿತ್ತಾರವನ್ನು ಬಿಡಿಸುತ್ತವೆ.

ಈ ಮೊದಲೇ ತಿಳಿಸಿದಂತೆ ಕಳೆದ ವರುಷವು ನನಗೆ ಅನೇಕ ಸಿಹಿ ನೆನಪು,ಸ್ಥಾನ ಮಾನಗಳನ್ನು ದಕ್ಕಿಸಿದ್ದರೂ, "ಅಗಲಿಕೆ"ಯ ದುಃಖದಿಂದ ಬಳಲಿದ ವರುಷವು ಅದಾಗಿತ್ತು. ಜೀವನದ ಹೊಸ ಅಧ್ಯಾಯವನ್ನು ರೂಪಿಸಲು ಈ ಮಹಾನಗರಕ್ಕೆ ಕಾಲಿಡುವಾಗ ಮನಸ್ಸಿನ ಒಂದು ಕೋಣೆಯಲ್ಲಿ ನನ್ನ ಪರಿಶ್ರಮಕ್ಕೆ ದಕ್ಕಿದ ಕೆಲಸವನ್ನು ತಬ್ಬಿಕೊಳ್ಳುವಾಗ, ಅದೇ ಮತ್ತೊಂದೆಡೆ ನಮ್ಮವರಿಂದ ದೂರವಾಗಿ ಹೊಸ ವಾತಾವರಣಕ್ಕೆ ಹೊಂದಿ ಕೊಳ್ಳಬೇಕಾದ ಪರಿಸ್ಥಿತಿ, ಚಡಪಡಿಸುವಿಕೆ. ಅಂತೂ ವಿದ್ಯಾರ್ಥಿ ದೆಸೆಯಿಂದ ಉದ್ಯೋಗದ ಮೆಟ್ಟಿಲಿಗೆ ಕಾಲಿಡುವಾಗ ನನ್ನ ಸಹೋದ್ಯೋಗಿಗಳು ನೀಡಿದ ಸಹಕಾರಕ್ಕೆ ನಾನೆಂದೂ ಋಣಿಯಾಗಿರುವೆ.

ಏಳು ಬೀಳುಗಳು ಜಗದ ನಿಯಮವೆಂಬಂತೆ ಬಹುತೇಕ ಮಂದಿಯೂ ನಾನು ಬೀಳುವಾಗ ಕೈ ನೀಡಿ ಮೇಲೆತ್ತಿದವರು, ನನ್ನ ಸಂತೋಷದಲ್ಲಿ ಪಾಲ್ಗೊಂಡು ನನಗೆ ಪ್ರೋತ್ಸಾಹ ನೀಡಿದವರು. ಅಂತಹ ಸಹೋದ್ಯೋಗಿ, ಗೆಳೆಯರನ್ನು ಪಡೆದುದಕ್ಕಾಗಿ ನನಗೆ ಸಂತೋಷವಿದೆ. ವಿವಿಧ ಆಚಾರ-ವಿಚಾರ, ಭಾಷೆ, ಸಂಸ್ಕೃತಿಯಲ್ಲಿ ಬೆರೆಯಲು ಅವಕಾಶ ಸಿಕ್ಕಿದುದೇ ಕಳೆದ ವರ್ಷದ ನನ್ನ ಅನುಭವಗಳಲ್ಲಿ ಪ್ರಧಾನವಾದುದು.

ನನ್ನ ಕಾಲಲ್ಲಿ ನಾನು ನಿಂತುಕೊಳ್ಳಲು ಯೋಗ್ಯತೆಯನ್ನು ಗಿಟ್ಟಿಸಿ ಕೊಂಡಿದ್ದೇನೆ ಎಂದು ಹೇಳಲು ನನಗೆ ಅಭಿಮಾನವಿದೆ. ದಿನೇ ದಿನೇ ಮೂಡುವ ಹೊಸ ಸವಾಲುಗಳನ್ನು ಎದುರಿಸಿ ಅನುಭವವನ್ನು ಸಂಪಾದಿಸುವುದರೊಂದಿಗೆ, ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಇನ್ನು ಮುಂದೆ ವರ್ಷದಾದ್ಯಂತ ವಿವೇಕಪೂರ್ವವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂಬ ಹಂಬಲ ನನಗಿದೆ.

ಎಂದಿನಂತೆ ಈ ಬಾರಿಯೂ ಹೊಸ ವರುಷದಲ್ಲಿ ಹಲವಾರು ಸವಾಲುಗಳನ್ನು ಹಿಮ್ಮೆಟ್ಟಿ ನಿಲ್ಲಲು ನನಗೆ ಶಕ್ತಿಯನ್ನು ಕರುಣಿಸು ಎಂಬ ಪ್ರಾರ್ಥನೆಯೊಂದಿಗೆ ಹೊಸ ವರುಷದ ಹೊಸ ದಿನವನ್ನು ಪ್ರಾರಂಭಿಸುತ್ತೇನೆ. ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದಾದ ಸೂರ್ಯೋದಯದ ವೀಕ್ಷಣೆಗೆ ಈ ದಿನ ಹೆಚ್ಚಿನ ಮಹತ್ವವನ್ನು ನೀಡುತ್ತೇನೆ. ಅದೇ ರೀತಿ ಬೆಳಗ್ಗಿನ ಜಾವಕ್ಕೆ ದೇವಾಲಯಕ್ಕೆ ತೆರಳಿ ಪ್ರಾರ್ಥಿಸುವುದನ್ನು ಈ ಬಾರಿಯೂ ಮುಂದುವರಿಸಲು ನಿರ್ಧರಿಸಿದ್ದೇನೆ.

ಉದ್ಯೋಗ ನಿಮಿತ್ತ ಈ 'ಮೆಟ್ರೋ'ಗೆ ಹೊಸ ವ್ಯಕ್ತಿಯಾದ ಕಾರಣ ಇಲ್ಲಿನ ದೇವಾಲಯಗಳಲ್ಲಿ ಪ್ರಾರ್ಥಿಸುವಾಗ ನನ್ನ ಇಷ್ಟ ದೇವರಾದ "ಮಧೂರು ಗಣಪತಿ"ಯನ್ನು ಮಿಸ್ ಮಾಡುತ್ತಿದ್ದೇನೆ. ದೇವರೊಂದೇ ನಾಮ ಹಲವು ಎಂದು ಬಡಬಡಿಸಿದರೂ ನನ್ನ ಭಕ್ತಿಯ ಬಗ್ಗೆ ನನ್ನದೇ ಆದ ವಿಶ್ವಾಸಗಳಿವೆ, ಅದು ನನ್ನ ಜೀವನದಲ್ಲಿ ಮಹತ್ವವಾದ ಕೊಂಡಿಯನ್ನಿರಿಸಿಕೊಂಡಿದೆ ಎಂದು ಹೇಳಿದರೂ ತಪ್ಪಾಗಲಾರದು.

ಸ್ವಲ್ಪ ಹೊತ್ತು ಭಗವದ್ಗೀತೆಯನ್ನು ಪಠಿಸುವುದು ನನ್ನ ಮನಸ್ಸಿನ ಚಂಚಲತೆಯನ್ನು ದೂರಮಾಡಲು ಸಹಕಾರಿಯಾಗುವುದರಿಂದ ಅದೂ ದಿನಚರಿಯ ಪಟ್ಟಿಯಲ್ಲಿ ಸೇರಿಕೊಂಡಿದೆ. ಅಂತೂ ಒಟ್ಟಿನಲ್ಲಿ ನನ್ನ ಸ್ನೇಹಿತರು, ನನ್ನ ಕುಟುಂಬದವರು ನನಲ್ಲಿ ಕಂಡುಕೊಂಡ ಮತ್ತು ಅವರಿಗೆ ನಾನಿತ್ತ ಭರವಸೆಗಳಿವೆ, ಜೊತೆಗೆ ಅವರು ನನ್ನಲ್ಲಿರಿಸಿಕೊಂಡಂತಹ ವಿಶ್ವಾಸಗಳಿಗೆ, ಮನಸ್ಸಿನ ಮೂಲೆಯಲ್ಲಿ ನಿರ್ಮಿಸಿದ ಕನಸಿನ ಗೋಪುರದ ನನಸಿಗಾಗಿ ಶ್ರಮಿಸಬೇಕಾಗಿದೆ, ಬಾಳ ಪಯಣದಲ್ಲಿ ಸಾಗುತ್ತಾ ಇನ್ನಷ್ಟು ದೂರ ಕ್ರಮಿಸಬೇಕಾಗಿದೆ. ಮತ್ತಷ್ಟು ಸವಾಲುಗಳನ್ನು ಎದುರಿಸುತ್ತಾ, ಅನುಭವದ ಜೋಳಿಗೆಯನ್ನು ತುಂಬುತ್ತಾ ಹೊಸ ದಾರಿಯಲ್ಲಿ ಸಾಗಲು ಸಜ್ಜಾಗುತ್ತಿದ್ದೇನೆ.

Share this Story:

Follow Webdunia kannada